ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಜ್ಞಾನ ಅಧ್ಯಯನ ವಿಭಾಗ,ಮಾನಸ ಗಂಗೋತ್ರಿ

ಕನ್ನಡಪ್ರಭ ವಾರ್ತೆ ಮೈಸೂರುಕನ್ನಡ ಭಾಷೆಗೆ ಸಾವಾಲುಗಳಿವೆ ಆದರೆ ಸಾವಿಲ್ಲ. ನಿತ್ಯ ಜನರ ನಾಡಿಮಿಡಿತವಾಗಿದೆ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು ತಿಳಿಸಿದರು.ಮಾನಸಗಂಗೋತ್ರಿಯ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಘವು (ಮುಲಿಸಾ) ಶುಕ್ರವಾರ ಏರ್ಪಡಿಸಿದ್ದ ಉಪನ್ಯಾಸ ಮಾಲೆಯಲ್ಲಿ ಅವರು, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ವಿಶೇಷ ಉಪನ್ಯಾಸ ನೀಡಿದರು.ಸವಾಲು ಬಂದಾಗಲೆಲ್ಲಾ ಕನ್ನಡ ಮತ್ತೆ ಚಿಗುರಿದೆ. ಕನ್ನಡಕ್ಕೆ 2000 ರಿಂದ 2500 ವರ್ಷಗಳಿಗಿಂತ ಹೆಚ್ಚು ಇತಿಹಾಸವಿದೆ. ಹಲ್ಮಿಡಿ ಶಾಸನ (ಕ್ರಿ.ಶ. 450) ಕನ್ನಡದ ಅತ್ಯಂತ ಹಳೆಯ ಪೂರ್ಣ ಶಾಸನ ಎಂದು ಗುರುತಿಸಲಾಗಿದೆ. 2008ರಲ್ಲಿ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿದೆ. ಭಾರತದಲ್ಲಿ ಈ ಗೌರವ ಪಡೆದಿರುವುದು ಕೇವಲ 6 ಭಾಷೆಗಳು ಮಾತ್ರ ಎಂದು ಅವರು ಹೇಳಿದರು.ಅಲ್ಲದೆ, ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿ ಬಂದಿದೆ. ಇದು ಸಾಮಾನ್ಯವೇ? ಕನ್ನಡ ಕೇವಲ ಮಾತನಾಡುವ ಭಾಷೆಯಲ್ಲ, ಜ್ಞಾನದ ಭಾಷೆಯಾಗಿದೆ. ಜ್ಞಾನಪೀಠದಂತಹ ಮಹತ್ವದ ಗೌರವಕ್ಕೆ ಮಹಿಳೆಯರನ್ನೂ ಆಯ್ಕೆ ಮಾಡಿ ಗೌರವ ಸಲ್ಲಿಸಬೇಕಿದೆ ಎಂದರು.ಜಾಗತಿಕ ಮಟ್ಟದಲ್ಲಿ ಕನ್ನಡ ವಿಶಾಲವಾಗಿ ತೆರೆದುಕೊಂಡಿದೆ. ಇವತ್ತಿನ ಡಿಜಿಟಲ್ ಯುಗದಲ್ಲಿ ಕನ್ನಡ ತನ್ನ ವ್ಯಾಪ್ತಿ ಮೀರಿ ವಿಸ್ತರಿಸಿಕೊಂಡು ಮುನ್ನುಗಿದೆ. ಗಡಿನಾಡಿನ ಕನ್ನಡ ಹಳ್ಳಿಗಳು ಇನ್ನೂ ತನ್ನ ಆಡಳಿತಾತ್ಮಕವಾಗಿ ಗುರುತಿಸಿಕೊಳ್ಳುವಳ್ಳಿ ಕಷ್ಟವಾಗಿದೆ. ತಮಿಳುನಾಡಿನಂತ ಗಡಿನಾಡಿನಲ್ಲಿ ಕನ್ನಡದ ಹಳ್ಳಿಗಳು ಯಾವ ರಾಜ್ಯಕ್ಕೆ ಸೇರಬೇಕು ಎಂಬ ಸಮಸ್ಯೆಗೆ ಪರಿಹಾರ ಬೇಗನೇ ಸಿಗಬೇಕಿದೆ ಎಂದು ಅವರು ತಿಳಿಸಿದರು.ಸರ್ಕಾರಿ ಕನ್ನಡ ಶಾಲೆಗಳತ್ತ ಸರ್ಕಾರ ಆಲೋಚಿಸಿ, ಕನ್ನಡದ ಅಸ್ಮಿತೆಯನ್ನು ಉಳಿಸಿ ಕಾಪಾಡಬೇಕಿದೆ. ಇದು ಬಹುದೊಡ್ಡ ಸವಾಲಿಗಿದೆ. ಯಾಕೆಂದರೆ ಕನ್ನಡದ ಬಳಕೆ ಜನ ಸಾಮಾನ್ಯರಲ್ಲಿದೆ. ಅದಕ್ಕೆ ಒಂದು ಸ್ಪಷ್ಟತೆ ಸಿಗಬೇಕು ಎಂದರೆ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕನ್ನಡ ಗಟ್ಟಿಯಾಗಿ ಶೈಕ್ಷಣಿಕವಾಗಿ ನೆಲೆ ನಿಲ್ಲಬೇಕಿದೆ. ಇಂಗ್ಲಿಷ್ ಹಾಗೂ ಇತರ ಭಾಷೆಗಳ ಪ್ರಭಾವದಿಂದಲೂ ಕನ್ನಡ ವನ್ನು ಕಾಪಾಡುವ ಹೊಣೆ ಸರ್ಕಾರ ಹಾಗೂ ಜನರ ಮೇಲಿದೆ ಎಂದರು.ಗ್ರಂಥಾಲಯ ಹಾಗೂ ಮಾಹಿತಿ ತಂತ್ರಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎನ್.ಎಸ್. ಹರಿನಾರಾಯಣ, ಪ್ರಾಧ್ಯಾಪಕರಾದ ಎಂ. ಚಂದ್ರಶೇಖರ, ಎಚ್. ಆದಿತ್ಯಕುಮಾರಿ, ಎಂ. ಸುನಿಲ್ ಕುಮಾರ್, ಬಿ. ನಿವೇದಿತಾ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಿ. ಮನೋಜ್ ಇದ್ದರು. ಡಿ. ಸುಪ್ರಿತಾ ಪ್ರಾರ್ಥಿಸಿದರು. ಎಸ್. ಅನ್ನಪೂರ್ಣ ಸ್ವಾಗತಿಸಿದರು. ಎಂ.ಎಸ್. ಸಂಜಯ್ ಕುಮಾರ್ ನಿರೂಪಿಸಿದರು.