ಸಾರಾಂಶ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ, ಭಾರತದ ಸಂವಿಧಾನ ಇತರ ಎಲ್ಲ ದೇಶಗಳಿಗಿಂತ ಭಿನ್ನ, ಮಾತ್ರವಲ್ಲ ಅತ್ಯಂತ ಮಹತ್ವದ್ದೂ ಆಗಿದೆ. ಸಂವಿಧಾನದ ವಿಷಯವನ್ನು ಮಕ್ಕಳಿಗೆ ತಿಳಿಸುವ ಕಾರ್ಯ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಭಾರತ ಸಂವಿಧಾನದ 75ನೇ ವರ್ಷದ ಅಮೃತ ಮಹೋತ್ಸವ ಅಂಗವಾಗಿ ನಗರದ ಶಾರದಾ ವಿದ್ಯಾಲಯದಲ್ಲಿ ಡಾ.ಪಿ.ಅನಂತಕೃಷ್ಣ ಭಟ್ ನೇತೃತ್ವದಲ್ಲಿ ತುಳು ಭಾಷೆಯಲ್ಲಿ ‘ಭಾರತ ಸಂವಿಧಾನ’ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ, ಭಾರತದ ಸಂವಿಧಾನ ಇತರ ಎಲ್ಲ ದೇಶಗಳಿಗಿಂತ ಭಿನ್ನ, ಮಾತ್ರವಲ್ಲ ಅತ್ಯಂತ ಮಹತ್ವದ್ದೂ ಆಗಿದೆ. ಸಂವಿಧಾನದ ವಿಷಯವನ್ನು ಮಕ್ಕಳಿಗೆ ತಿಳಿಸುವ ಕಾರ್ಯ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ದೇಶದಲ್ಲಿ ಸ್ನಾತಕೋತ್ತರ ತರಗತಿವರೆಗೆ 51 ಕೋಟಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅತಿಹೆಚ್ಚು ಯುವ ಸಮುದಾಯವನ್ನು ಹೊಂದಿದ ಪ್ರಬಲ ರಾಷ್ಟ್ರವೂ ಹೌದು. ದೇಶದ ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ ಅರ್ಥೈಸಿಕೊಂಡರೆ ದೇಶ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ಡಾ.ಆಳ್ವ ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ, ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಹೋರಾಟ ಬಹು ವರ್ಷಗಳಿಂದ ನಡೆಯುತ್ತಿದ್ದರೂ, ಇನ್ನೂ ಸಾಧ್ಯವಾಗದಿರುವುದು ಬೇಸರದ ವಿಷಯ. ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಕಾರಣ ಎಂದು ಖೇದ ವ್ಯಕ್ತಪಡಿಸಿದರು.
ಕಾರ್ಯಕ್ರಮ ಸಂಯೋಜಕ ಡಾ.ಪಿ. ಅನಂತಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕುಮಿ ತಂಡದ ರೂವಾರಿ ಕಿಶೋರ್ ಡಿ. ಶೆಟ್ಟಿ, ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲ್ ಇದ್ದರು.