ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕೃಷಿಗೆ ಪ್ರಕೃತಿಯೇ ಗುರು ಎಂದು ಕೃಷಿ ತಜ್ಞರಾದ ಡಾ. ಹಾಲತಿ ಸೋಮಶೇಖರ ಹೇಳಿದರು.ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ರೈತರ ಶಿಬಿರದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ನಮ್ಮ ಋಷಿ ಮುನಿಗಳು ಕೃಷಿಕರಾಗಿದ್ದರು. ಅಗ್ನಿ, ವಾಯು ಹಾಗೂ ವರುಣನನ್ನು ಪ್ರತಿನಿತ್ಯ ಪ್ರಾರ್ಥಿಸಿ ತಮ್ಮ ಕೃಷಿಯನ್ನು ಪ್ರಾರಂಭಿಸುತ್ತಿದ್ದರು. ವೇದ ಕೃಷಿಯನ್ನು ಅಳವಡಿಕೊಳ್ಳಲು ಇಚ್ಚಿಸುವ ರೈತರು ತಮ್ಮ ಕೃಷಿ ಭೂಮಿಯನ್ನು ಪ್ರಯೋಗಾಲಯವನ್ನಾಗಿ ಮಾಡಿ ಕೃಷಿ ಸಂಸ್ಕೃತಿಯನ್ನು ಜನರಲ್ಲಿ ಬೆಳೆಸಬೇಕು. ರಾಸಾಯನಿಕ ಮುಕ್ತ ಆಹಾರವು ಎಲ್ಲರಿಗೂ ದೊರಕುವಂತೆ ಮಾಡಬೇಕು ಎಂದು ಅವರು ತಿಳಿಸಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ವಿನೋದ್ ಮಾತನಾಡಿ, ರಾಷ್ಟ್ರದ ಅಭಿವೃದ್ಧಿಯಲ್ಲಿ ರೈತರ ಕೊಡುಗೆ ಅಪಾರ. ಕೃಷಿ ಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ರೀತಿಯ ಸಾಲ ಸೌಲಭ್ಯಗಳನ್ನು ಒದಗಿಸುತ್ತಿವೆ. ಅದರ ಬಗ್ಗೆ ಸರಿಯಾದ ತಿಳುವಳಿಕೆ ಹೊಂದಿ ರೈತಭಾಂದವರು ಸದುಪಯೋಗಪಡಿಸಿಕೊಳ್ಳಬೇಕು. ರೈತರು ಸಂಕಷ್ಟದ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗದೆ ಆರ್ಥಿಕ ಶಿಸ್ತನ್ನು ರೂಪಿಸಿಕೊಂಡು ಬದುಕಬೇಕೆಂದು ಕರೆ ನೀಡಿದರು. ಡಾ. ಬಿ.ಎನ್. ಷಡಕ್ಷರಿ ಮೂರ್ತಿ ಮಾತನಾಡಿ, ಮಿಶ್ರ ಬೇಸಾಯ ಪದ್ಧತಿಯು ಒಂದು ಆಧುನಿಕ ಕೃಷಿ ಪದ್ಧತಿಯಾಗಿದ್ದು, ಇದರಲ್ಲಿ ಹೈನುಗಾರಿಕೆಯು ಒಂದಾಗಿದೆ. ಆರ್ಥಿಕ ಸ್ವಾವಲಂಬನೆಯ ದೃಷ್ಟಿಯಲ್ಲಿ ರೈತರಿಗೆ ಬಹಳ ಸಹಕಾರಿಯಾಗಿದೆ. ಗಿರ್, ಸಿಂದಿ, ರತಿ, ಹಳ್ಳಿಕಾರ್ ಮುಂತಾದವುಗಳು ಪ್ರಮುಖ ಹಸು ತಳಿಗಳಾಗಿದ್ದು, ಸ್ಥಳೀಯವಾಗಿ ದೊರೆಯುವ ತಳಿಗಳನ್ನು ಸಾಕುವುದು ಉತ್ತಮ. ಹೈನುಗಾರಿಕೆಯಿಂದ ಕೃಷಿ ಭೂಮಿಗೆ ಉತ್ತಮ ಸಾವಯವ ಗೊಬ್ಬರ ಹಾಗೂ ಜನರಿಗೆ ಪೋಷಕಯುಕ್ತವಾದ ಆಹಾರ ದೊರೆಯುತ್ತದೆ ಎಂದು ತಿಳಿಸಿದರು.ಕಪಿಲಾ ನದಿ ತೀರದಲ್ಲಿ ಪ್ರಾರ್ಥನೆ ಹಾಗೂ ಕಪಿಲಾರತಿ ಕಾರ್ಯಕ್ರಮದಲ್ಲಿ ಶ್ರದ್ಧಾ ಭಕ್ತಿಗಳಿಂದ ಪಾಲ್ಗೊಂಡರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.