ಸಾರಾಂಶ
ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಹಲವಾರು ಸ್ಪರ್ಧಿಗಳು, ದೈಹಿಕ ಶಿಕ್ಷಣ ಉಪನ್ಯಾಸಕರು, ತೀರ್ಪುಗಾರರು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮೈಸೂರು
ಕ್ರೀಡೆ ದೇಹ ಮತ್ತು ಮನಸ್ಸನ್ನು ಸದೃಢಗೊಳಿಸುವ ಕ್ರಿಯೆ. ಏಕಾಗ್ರತೆಯ ಜೊತೆ ಆಹ್ಲಾದಕತೆಯನ್ನು ನೀಡುತ್ತದೆ ಎಂದು ಜಿಲ್ಲಾ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮರಿಸ್ವಾಮಿ ತಿಳಿಸಿದರು.ಜಿಲ್ಲೆಯ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯು ನಗರದ ಎಂಎಂಕೆ ಮತ್ತು ಎಸ್.ಡಿ.ಎಂ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಮೈಸೂರು ಜಿಲ್ಲಾ ಮಟ್ಟದ ಬಾಲಕ ಮತ್ತು ಬಾಲಕಿಯರ ಟೇಬಲ್ ಟೆನ್ನಿಸ್, ಚೆಸ್ ಮತ್ತು ಯೋಗಾಸನ ಸ್ಪರ್ಧೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.ಸುಧಾರಿತ ಕ್ರೀಡೆಗಳ ಮಧ್ಯೆ ಎಷ್ಟೋ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗಿವೆ. ಸೋಲು- ಗೆಲುವುಗಳನ್ನು ಲೆಕ್ಕಿಸದೆ ಕ್ರೀಡಾಪಟುಗಳು ಸ್ಪರ್ಧಾ ಮನೋಭಾವದಿಂದ ಭಾಗವಹಿಸಬೇಕು ಎಂದು ಅವರು ಸಲಹೆ ನೀಡಿದರು.ಎಂ.ಎಂ.ಕೆ ಮತ್ತು ಎಸ್.ಡಿ.ಎಂ ಮಹಿಳಾ ಕಾಲೇಜು ಪ್ರಾಂಶುಪಾಲೆ ಪ್ರೊ.ಎನ್. ಭಾರತಿ ಮಾತನಾಡಿ, ಯೋಗವು ಮನಸ್ಸಿನ ಸಮತ್ವವನ್ನು ಕಾಯ್ದುಕೊಳ್ಳುತ್ತದೆ. ಹೀಗಾಗಿ ವಿಶ್ವಾದ್ಯಂತ ಅದರ ಪ್ರಚಾರ ಇಂದು ಹೆಚ್ಚಾಗಿದೆ. ಚದುರಂಗದಂತಹ ಕ್ರೀಡೆಗಳು ಮುಂದುವರೆದು ಆರ್ಟಿಫಿಶಿಯಲ್ ಇಂಟಲಿಜೆನ್ಸ್, ತಂತ್ರಜ್ಞಾನಕ್ಕೂ ಒಳಪಟ್ಟಿವೆ. ಹಸಿವು, ನಿದ್ರೆ, ಜೀರ್ಣ ಕ್ರಿಯೆಗೆ ಔಷಧಿ ತೆಗೆದುಕೊಳ್ಳುವ ಇಂದಿನ ಪರಿಸ್ಥಿತಿಯಲ್ಲಿ ಎಲ್ಲರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಹಲವು ದೈಹಿಕ ಮಾನಸಿಕ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಎಂ.ಎಂ.ಕೆ. ಮತ್ತು ಎಸ್.ಡಿ.ಎಂ. ಬಾಲಕಿಯರ ಪಿಯು ಕಾಲೇಜು ಪ್ರಾಂಶುಪಾಲೆ ನಯನಕುಮಾರಿ ಮಾತನಾಡಿ, ವಿಶ್ವ ಮಟ್ಟದಲ್ಲಿ ಮೈಸೂರು ಯೋಗ ಕೇಂದ್ರವಾಗಿ ಪ್ರಸಿದ್ಧವಾಗಿದೆ. ಮಾನವನ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.ಇದೇ ವೇಳೆ ಡಿಡಿಪಿಯು ಮರಿಸ್ವಾಮಿ ಹಾಗೂ ಮಹಾಜನ ಪಿಯು ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ಕೆ.ಎಂ. ಕಾಂತರಾಜು ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಈ ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಹಲವಾರು ಸ್ಪರ್ಧಿಗಳು, ದೈಹಿಕ ಶಿಕ್ಷಣ ಉಪನ್ಯಾಸಕರು, ತೀರ್ಪುಗಾರರು ಭಾಗವಹಿಸಿದ್ದರು.ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಎಚ್.ಎಚ್. ರಾಜೇಶ್ವರಿ, ಉಪನ್ಯಾಸಕರ ಸಂಘದ ಅಧ್ಯಕ್ಷ ಎನ್.ಎಂ. ಮಹದೇವ, ಮೈಸೂರು ವಿಭಾಗದ ಕ್ರೀಡಾ ಸಂಚಾಲಕರಾದ ಕೆ.ಆರ್. ಮುರಳೀಧರ, ಕೆ.ಆರ್. ಮಂಜುನಾಥ್, ಕೆಸರೆ ಪಿಯು ಕಾಲೇಜಿನ ಪ್ರಾಂಶುಪಾಲ ವಿಜಯೇಂದ್ರಕುಮಾರ್, ವಿಜಯ ವಿಠಲ ಪಿಯು ಕಾಲೇಜು ಪ್ರಾಂಶುಪಾಲ ಸತ್ಯಪ್ರಸಾದ್, ಕಾಲೇಜಿನ ದೈಹಿಕ ಶಿಕಷಣ ನಿರ್ದೇಶಕಿ ಮಾಲತಿ, ಕನ್ನಡ ವಿಭಾಗದ ಮುಖ್ಯಸ್ಥೆ ಟಿ. ಪ್ರತಿಮಾ ಇದ್ದರು. ಹರ್ಷಿತಾ ಮತ್ತು ಗುಣಾ ಪ್ರಾರ್ಥಿಸಿದರು.