ಮದ್ಯ ಅಕ್ರಮ ಮಾರಾಟ ಮಾಡಿದರೆ ಕಾನೂನು ಕ್ರಮ

| Published : Dec 22 2024, 01:34 AM IST

ಸಾರಾಂಶ

ತಾಲೂಕಿನ ಅನೇಕ ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ ಮಾಡಲಾಗುತ್ತಿದೆ ಎಂದು ಡಿ.೧೬ ರಂದು ಕನ್ನಡಪ್ರಭದಲ್ಲಿ "ಗ್ರಾಮಸ್ಥರ ನಿದ್ದೆಗೆಡಿಸಿರುವ ಅಕ್ರಮ ಮದ್ಯ ಮಾರಾಟ " ಎಂಬ ಶೀಷಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಮಧುಗಿರಿ ಅಬಕಾರಿ ಉಪ ಅಧೀಕ್ಷಕ ದೀಪಕ್. ಎಸ್ ಗ್ರಾಮಗಳಲ್ಲಿ ಭೇಟಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಅನೇಕ ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ ಮಾಡಲಾಗುತ್ತಿದೆ ಎಂದು ಡಿ.೧೬ ರಂದು ಕನ್ನಡಪ್ರಭದಲ್ಲಿ "ಗ್ರಾಮಸ್ಥರ ನಿದ್ದೆಗೆಡಿಸಿರುವ ಅಕ್ರಮ ಮದ್ಯ ಮಾರಾಟ " ಎಂಬ ಶೀಷಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಮಧುಗಿರಿ ಅಬಕಾರಿ ಉಪ ಅಧೀಕ್ಷಕ ದೀಪಕ್. ಎಸ್ ಗ್ರಾಮಗಳಲ್ಲಿ ಭೇಟಿ ಪರಿಶೀಲಿಸಿದರು.ಅಬಕಾರಿ ಇಲಾಖೆ ತಂಡ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕಾದಿಲಾಪುರ, ತಿಮ್ಮನಹಳ್ಳಿ, ಶಿಕಾರಿಪುರ ಗ್ರಾಮದ ಹಕ್ಕಿ-ಪಿಕ್ಕಿ ಕಾಲೋನಿಗಳಲ್ಲಿ ಅಕ್ರಮವಾಗಿ ಮದ್ಯ, ಸೇಂದಿ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಮಗಳಲ್ಲಿರುವ ಮನೆ, ಅಂಗಡಿಗಳ ಮೇಲೆ ಹಾಗೂ ಸುತ್ತ-ಮುತ್ತಲಿನ ಸಂಶಯಾಸ್ಪದ ಸ್ಥಳಗಳಲ್ಲಿ ದಾಳಿ ಮಾಡಿ ಶೋಧಿಸಿತು.

ಮಧುಗಿರಿ ಅಬಕಾರಿ ಉಪ ಅಧೀಕ್ಷಕ ದೀಪಕ್. ಎಸ್ ಮಾತನಾಡಿ, ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ಮಾಡಿ ಈ ಹಿಂದೆ ಅಬಕಾರಿ ಪ್ರಕರಣದಲ್ಲಿನ ಆರೋಪಿಗಳ ಮನೆಗಳು ಹಾಗೂ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು. ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಮನೆ, ಅಂಗಡಿ ಮಾಲೀಕರಿಗೆ ಅಬಕಾರಿ ಕಾನೂನಿನ ಅರಿವು ಮೂಡಿಸಿ, ಮುಂದಿನ ದಿನಗಳಲ್ಲಿ ಮದ್ಯ ಅಕ್ರಮ ಮಾರಾಟ ಮಾಡುವುದು ಕಂಡುಬಂದಲ್ಲಿ ಅಬಕಾರಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಗ್ರಾಮಸ್ಥರಿಗೆ ನಕಲಿ ಮದ್ಯ, ಕಳ್ಳಭಟ್ಟಿ ಸಾರಾಯಿ, ಸೇಂದಿ ಹಾಗೂ ಗಾಂಜಾ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಲಾಗಿದೆ ಎಂದು ಹೇಳಿದರು.

ನಿಮ್ಮ ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ ಮಾಡುವುದನ್ನ ಕಂಡುಬಂದಲ್ಲಿ ಗ್ರಾಪಂ ವತಿಯಿಂದ ನಡೆಯುವ ಗ್ರಾಮಸಭೆಗಳಲ್ಲಿ ತಿಳಿಸಬೇಕು. ನಮ್ಮ ಕಚೇರಿಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು. ಖುದ್ದಾಗಿ ಇಲಾಖೆಯ ಕಚೇರಿಗೆ ಬಂದು ಮಾಹಿತಿ ನೀಡಬಹುದು. ಈ ಕುರಿತು ಮುಂಬರುವ ದಿನಗಳಲ್ಲಿ ನಮ್ಮ ಸಿಬ್ಬಂದಿಗಳು ಗ್ರಾಮಗಳಲ್ಲಿ ಅಬಕಾರಿ ಗಸ್ತು ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತುಮಕೂರು ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕ. ನವೀನ್ ಎ.ಕೆ, ಹಾಗೂ ಕೊರಟಗೆರೆ ಅಬಕಾರಿ ಅದಿಕಾರಿಗಳಾದ ಪ್ರಬಾಕರ್, ಕರಿಬಸಪ್ಪ, ಅಜ್ಜಣ್ಣ, ರಾಜೇಶ್, ಕುಮಾರ್, ಹಮೀದ್, ಮಲ್ಲಿಕಾರ್ಜುನ್, ಮಂಜುಳ, ನಿಂಗಣ್ಣ, ರಾಜಕುಮಾರ್ ಇದ್ದರು.