ಜನ ವಿರೋಧದ ನಡುವೆ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಲ್ಲಿ ಕಾನೂನು ಹೋರಾಟ : ಅಪ್ಪಚ್ಚು ರಂಜನ್

| Published : Aug 08 2025, 02:00 AM IST

ಜನ ವಿರೋಧದ ನಡುವೆ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಲ್ಲಿ ಕಾನೂನು ಹೋರಾಟ : ಅಪ್ಪಚ್ಚು ರಂಜನ್
Share this Article
  • FB
  • TW
  • Linkdin
  • Email

ಸಾರಾಂಶ

ಜನ ವಿರೋಧದ ನಡುವೆ ರಾಜಾಸೀಟ್‌ ಉದ್ಯಾನವನದಲ್ಲಿ ಗ್ಲಾಸ್‌ ಬ್ರಿಡ್ಜ್‌ ನಿರ್ಮಾಣಕ್ಕೆ ಮುಂದಾದಲ್ಲಿ ಕಾನೂನು ಹೋರಾಟ ಮಾಡುವುದಾಗಿ ಮಾಜಿ ಸಚಿವ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜನ ವಿರೋಧದ ನಡುವೆ ರಾಜಾಸೀಟ್ ಉದ್ಯಾನವನದಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಲ್ಲಿ ಕಾನೂನು ಹೋರಾಟ ಮಾಡುವುದಾಗಿ ಮಾಜಿ ಸಚಿವ ಅಪ್ಪಚ್ಚುರಂಜನ್ ಎಚ್ಚರಿಸಿದ್ದಾರೆ.ರಾಜಾಸೀಟ್ ಉದ್ಯಾನವನ ಜನಸಂದಣಿ ಹೆಚ್ಚಿರುವ ಪ್ರದೇಶ. ಈಗಾಗಲೇ ವಾಹನ ನಿಲುಗಡೆಗೆ ಸ್ಥಳವಿಲ್ಲದೆ ಸಮಸ್ಯೆ ಉದ್ಬವವಾಗಿದೆ. ಇಂತಹ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸದೇ ಜನರಿಗೆ ಸಮಸ್ಯೆಯಾಗಬಲ್ಲ ಮತ್ತೊಂದು ಯೋಜನೆಯನ್ನು ಜಾರಿಗೆ ತರಲು ಮುಂದಾಗಿರುವುದು ಖಂಡನೀಯ.

ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ರಾಜಾಸೀಟ್ ಸೂಕ್ತ ಸ್ಥಳವಲ್ಲ, ಹೀಗಿದ್ದರೂ ಸಾರ್ವಜನಿಕರ ವಿರೋಧದ ನಡುವೆ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಲ್ಲಿ ಕಾನೂನು ಹೋರಾಟದ ಜತೆಗೆ ಸ್ಥಳೀಯರ ಸಹಕಾರದೊಂದಿಗೆ ಸೇರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ರಂಜನ್ ಎಚ್ಚರಿಸಿದರು.ಜಿಲ್ಲೆಯಲ್ಲಿ ಅಸ್ಸಾಮಿಗರ ಸೋಗಿನಲ್ಲಿರುವ ಬಾಂಗ್ಲದೇಶಿಗರನ್ನು ಪತ್ತೆ ಹಚ್ಚುವ ಕೆಲಸವಾಗಬೇಕು. ವಲಸೆ ಬಂದ ಕಾರ್ಮಿಕರಿಗೆ 10, 000 ಕ್ಕೂ ಅಧಿಕ ಆಧಾರ್ ಕಾರ್ಡ್ ಮಾಡಿಕೊಡಲಾಗಿದೆ ಎಂಬ ಮಾಹಿತಿಯಿದೆ. ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುವಂತಾಗಬೇಕು. ವಲಸೆ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮಾಲೀಕರು ಕಡ್ಡಾಯವಾಗಿ ವಲಸಿಗರ ಆಧಾರ್ ಕಾರ್ಡ್‌ನ್ನು ಪಡೆದು ಪೊಲೀಸ್ ಇಲಾಖೆ ನೀಡುವಂತಾಗಬೇಕು ಎಂದರು.ರಸ್ತೆಗಳು ಅಯೋಗ್ಯವಾಗಿದೆ :

ಜಿಲ್ಲೆಯ ಪಿಡಬ್ಲ್ಯೂಡಿ ಇಲಾಖೆಯ ರಸ್ತೆಗಳು ಗುಂಡಿಬಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ರಸ್ತೆ ನಿರ್ವಹಣೆಗೆ ಇರುವ ಅನುದಾನವನ್ನು ಸದ್ಬಳಕೆ ಮಾಡಿ ರಸ್ತೆ ದುರಸ್ತಿಗೊಳಿಸಲಾಗುತ್ತಿತ್ತು. ಆದರೆ, ಇಂದಿನ ಸರ್ಕಾರ ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ದೂರಿದರು. ಕಾಡಾನೆ ಹಾವಳಿಗೂ ಕಡಿವಾಣವಿಲ್ಲ :

ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ಕಡಿವಾಣ ಹಾಕುತ್ತಿಲ್ಲ. ಆನೆ ಕಂದಕ ನಿರ್ವಾಹಣೆ ಮಾಡಲಾಗುತ್ತಿಲ್ಲ. ಈ ಹಿನ್ನೆಲೆ ಕಾಡಿನಿಂದ ನಾಡಿಗೆ ಆನೆಗಳು ಹೆಚ್ಚಾಗಿ ಬರುತ್ತಿದೆ. ಪ್ರಸಕ್ತ ಸಾಲಿನಲ್ಲಿ 14ಕ್ಕೂ ಅಧಿಕ ಜನ ಆನೆದಾಳಿಗೆ ಒಳಗಾಗಿದ್ದಾರೆ. ಜತೆಗೆ ಹುಲಿದಾಳಿಗೆ ಜಾನುವಾರುಗಳು ಬಲಿಯಾಗುತ್ತಿದೆ. ಒಟ್ಟಿನಲ್ಲಿ ಸರ್ಕಾರಕ್ಕೆ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲವಂತಾಗಿದೆ ಎಂದರು.ಧರ್ಮಸ್ಥಳ ಒಂದು ಧಾರ್ಮಿಕ ಕ್ಷೇತ್ರ. ಧರ್ಮಸ್ಥಳ ಕ್ಷೇತ್ರದ ಗ್ರಾಮ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸಾಲ ಪಡೆದು ಹಲವರು ಇಂದು ಸಬಲರಾಗಿದ್ದಾರೆ. ಆದರೆ, ಇಂದು ಕೆಲವು ವ್ಯಕ್ತಿಗಳಿಂದ ಧಾರ್ಮಿಕ ಕ್ಷೇತ್ರಕ್ಕೆ ಕಳಂಕ ತರುವ ಕೆಲಸವಾಗುತ್ತಿದೆ. ಯೂಟ್ಯೂಬ್ ಚಾನಲ್‌ನ ವ್ಯಕ್ತಿಯೋರ್ವ ಎಲ್ಲ ದಾಖಲೆಗಳಿವೆ ಎಂದು ಹೇಳುತ್ತಾನೆ. ದಾಖಲೆಗಳಿದ್ದರೆ ಸಂಬಂಧಪಟ್ಟವರಿಗೆ ತಲುಪಿಸಲಿ. ಅವರು ಕ್ರಮ ಕೈಗೊಳ್ಳುತ್ತಾರೆ. ಅದು ಅಪಪ್ರಚಾರ ಮಾಡುವುದು ಸರಿಯಲ್ಲ. ಅಂತವರನ್ನು ಪೊಲೀಸರು ಬಂಧಿಸುವಂತಾಗಬೇಕು ಎಂದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ ಮಾತನಾಡಿ, ರಾಜಾಸೀಟ್‌ಗೆ ಗ್ಲಾಸ್ ಬ್ರಿಡ್ಜ್ ಸರ್ಕಾರ ತಂದಿದ್ದ ಅಥವಾ ಕಾಂಗ್ರೆಸ್ ನಾಯಕರು ತಂದಿದ್ದ ಎಂಬ ಅನುಮಾನವಿದೆ. ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಜಿಲ್ಲೆಗೆ ಯಾವುದೇ ಮಾರಕ ಯೋಜನೆಗಳನ್ನು ತಂದಿಲ್ಲ ಎಂದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ, ಸ್ಥಳೀಯರಿಗೆ ಮಾರಕವಾದ ಯೋಜನೆಗಳನ್ನು ಪ್ರತಿಯೊಬ್ಬರು ವಿರೋಧಿಸುವಂತಾಗಬೇಕೆಂದರು. ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ಬಿಜೆಪಿ ಜಿಲ್ಲಾ ಪ್ರಧಾ ಕಾರ್ಯದರ್ಶಿ ಜಗದೀಶ್ ರೈ, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಕವನ್ ಕಾರ್ಯಪ್ಪ ಸುದ್ದಿಗೋಷ್ಠಿಯಲ್ಲಿದ್ದರು.