ಪ್ರತಿಯೊಬ್ಬರಿಗೂ ಕಾನೂನು ಅರಿವು ಅವಶ್ಯಕ: ಪಿಎಸ್‌ಐ ಈರಪ್ಪ ರಿತ್ತಿ

| Published : Jan 15 2024, 01:45 AM IST

ಸಾರಾಂಶ

ಸಮಾಜದಲ್ಲಿ ಪ್ರತಿಯೊಬ್ಬರೂ ವ್ಯವಸ್ಥಿತವಾಗಿ ಬದುಕುವುದರ ಜೊತೆಗೆ ಶಾಂತಿ, ಸುವ್ಯವಸ್ಥೆ, ಭ್ರಾತೃತ್ವದೊಂದಿಗೆ ಬದುಕಲು ಕಾನೂನನ್ನು ತಪ್ಪದೇ ಪ್ರತಿಯೊಬ್ಬರೂ ಅರಿತುಕೊಳ್ಳುವುದು ಬಹು ಮುಖ್ಯವಾಗಿದೆ. ಕಾನೂನು ಅರಿವು- ನೆರವು ಎಲ್ಲರಿಗೂ ಅಗತ್ಯ ಎಂದು ಪಿಎಸ್‌ಐ ಈರಪ್ಪ ರಿತ್ತಿ ಹೇಳಿದರು.

ಶಿರಹಟ್ಟಿ: ಸಮಾಜದಲ್ಲಿ ಪ್ರತಿಯೊಬ್ಬರೂ ವ್ಯವಸ್ಥಿತವಾಗಿ ಬದುಕುವುದರ ಜೊತೆಗೆ ಶಾಂತಿ, ಸುವ್ಯವಸ್ಥೆ, ಭ್ರಾತೃತ್ವದೊಂದಿಗೆ ಬದುಕಲು ಕಾನೂನನ್ನು ತಪ್ಪದೇ ಪ್ರತಿಯೊಬ್ಬರೂ ಅರಿತುಕೊಳ್ಳುವುದು ಬಹು ಮುಖ್ಯವಾಗಿದೆ. ಕಾನೂನು ಅರಿವು- ನೆರವು ಎಲ್ಲರಿಗೂ ಅಗತ್ಯ ಎಂದು ಪಿಎಸ್‌ಐ ಈರಪ್ಪ ರಿತ್ತಿ ಹೇಳಿದರು.

ಶ್ರೀ ಜಗದ್ಗುರು ಫಕ್ಕೀರೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿರಹಟ್ಟಿ, ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ೨೦೨೩-೨೪ ಕಾರ್ಯಕ್ರಮದಡಿ ತಾಲೂಕಿನ ಚನ್ನಪಟ್ಟಣ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಜನಸಾಮಾನ್ಯರಿಗೆ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಕಾಯ್ದೆಯು ನಮ್ಮ ದೇಶದ ಸಂಸ್ಕೃತಿ, ಪರಂಪರೆ, ಧರ್ಮದ ತಳಹದಿಯ ಮೇಲೆ ನಿಂತಿದೆ. ಸಂವಿಧಾನ ಬದ್ಧವಾಗಿ ದೊರಕಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ನಡೆಯಲು ಕಾನೂನಿನ ಸಾಮಾನ್ಯ ಜ್ಞಾನ ಹಿಂದಿನ ಕಾಲಕ್ಕಿಂತಲೂ ಇಂದು ತೀರ ಅವಶ್ಯಕವಾಗಿದೆ ಎಂದರು.

ನಮ್ಮ ದೇಶದಲ್ಲಿ ಒಂದು ಮಗು ಹುಟ್ಟಿದ ತಕ್ಷಣ ಹಾಗೂ ಮರಣದವರೆಗೂ ಅದು ದೇಶದ ಕಾನೂನಿನ ವ್ಯಾಪ್ತಿಗೆ ಒಳಪಡುತ್ತದೆ. ದೇಶದಲ್ಲಿ ಎಲ್ಲರಿಗೂ ಸಮಾನ ಕಾನೂನು ಅವಕಾಶವಿದೆ. ಎಲ್ಲರೂ ಕಾನೂನು ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಪ್ರತಿಯೊಬ್ಬರೂ ನಮ್ಮ ಮೂಲಭೂತ ಕರ್ತವ್ಯಗಳೇನು ಎಂಬುದನ್ನು ತಿಳಿದು ನಡೆದುಕೊಳ್ಳುವುದು ಸಮಾಜ ಮತ್ತು ಬದುಕಿಗೆ ತೀರಾ ಅವಶ್ಯಕತೆಯಿದೆ. ಭೂಮಿ ಮೇಲಿರುವ ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಇದನ್ನು ಮನಗಂಡು ಎಲ್ಲರಿಗೂ ಉತ್ತಮ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕಿದೆ ಎಂದು ಸಲಹೆ ನೀಡಿದರು.

ಕಾನೂನು ಪದವಿ ಓದುತ್ತಿರುವ ವಿದ್ಯಾರ್ಥಿಗಳು ಕೇವಲ ಹಣ ಗಳಿಕೆಗೆ ಸೀಮಿತವಾಗದೇ ಬಡವರಿಗೆ ನೆರವಾಗುವ ಗುಣ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ಪ್ರಜೆಯೂ ಕಾನೂನನ್ನು ತಿಳಿದು ಗೌರವಿಸಬೇಕಿದ್ದು, ಅದು ನಮ್ಮ ಪ್ರಮುಖ ಕರ್ತವ್ಯಗಳಲ್ಲೊಂದಾಗಿದೆ ಎಂದು ತಿಳಿದಿಸಿದರು.

ಕಾನೂನು ಬಾಹಿರ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಯಾರೂ ಭಾಗವಹಿಸದೆ ಮುಕ್ತವಾದ ಜೀವನ ನಡೆಸುವುದು ಎಲ್ಲರಿಗೂ ಒಳಿತು. ಕಾನೂನು ಮೀರಿ ಹೋದದ್ದೇ ಆದರೆ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಕಾನೂನು ಪಾಲನೆ ಮಾಡುವುದು ನಮ್ಮೆಲ್ಲರ ಮೇಲಿದೆ ಎಂದು ನುಡಿದರು.

ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬದುಕಲು ಸಂವಿಧಾನ ಮತ್ತು ಅದರಲ್ಲಿನ ಕಾನೂನು ಪಾಲನೆ ಬಹಳ ಅವಶ್ಯ. ಜಾತಿ, ಧರ್ಮ ತಡೆದು ಮೇಲು-ಕೀಳುಗಳ ತುಚ್ಚ ಮನೋಭಾವ ದೂರಮಾಡಿ ಸಮಾನತೆಯಿಂದ ಬದುಕು ನಡೆಸಬೇಕೆಂದು ಸಲಹೆ ನೀಡಿದರು. ಶಾಂತಿ ಮತ್ತು ನೆಮ್ಮದಿ ಉಳಿಯಬೇಕಾದರೆ ಪ್ರತಿಯೊಬ್ಬರೂ ಕಾನೂನಿನ ಕನಿಷ್ಠ ಜ್ಞಾನವನ್ನು ಹೊಂದಿರಬೇಕು ಎಂದರು.

ಮಾಗಡಿ ಗ್ರಾಮ ಪಂಚಾಯಿತಿ ಸದಸ್ಯ ವೀರಯ್ಯ ಮಠಪತಿ ಮಾತನಾಡಿ, ಕಾನೂನು ಅರಿವು ನೆರವು ಕಾರ್ಯಕ್ರಮ ಬಹಳ ಮಹತ್ವದ್ದಾಗಿದ್ದು, ಶಿಕ್ಷಣ ಪಡೆದಿದ್ದರೂ ಕನಿಷ್ಠ ಮಟ್ಟದ ಕಾನೂನು ಅರಿವು ಹೊಂದಿರುವುದಿಲ್ಲ. ಹೀಗಾಗಿ ಈ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಲಾಗುತ್ತಿದೆ. ಪ್ರತಿಯೊಬ್ಬ ಪ್ರಜೆಯು ಕಾನೂನಿನ ಸೂಕ್ತ ನಿಯಮ ಪರಿಪಾಲನೆ ಮಾಡಬೇಕೆಂದು ತಿಳಿಸಿದರು.

ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದೆ. ಎಲ್ಲ ಕಾನೂನುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗದೇ ಇರಬಹುದು. ನಮ್ಮ ದೈನಂದಿನ ಜೀವನ ಯಾವುದೇ ಅಡೆತಡೆಯಿಲ್ಲದೇ ನೆಮ್ಮದಿಯಿಂದ ಸಾಗಲು ಅಲ್ಪ ಪ್ರಮಾಣದಲ್ಲಾದರೂ ಕಾನೂನು ಜಾಗೃತಿ ಪಡೆಯಬೇಕು ಎಂದರು.

ಮಾಗಡಿ ಗ್ರಾಮ ಪಂಚಾಯತ ಅಧ್ಯಕ್ಷ ಮೈಲಾರಪ್ಪ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಶೈನಾಜಬಿ ಬುವಾಜಿ, ಎಂ.ಎನ್. ಕುರಿ, ಉಪನ್ಯಾಸಕರಾದ ಜಯಪ್ರಕಾಶ ವನಹಳ್ಳಿ, ಸಂತೋಷ ಮುರಶಿಳ್ಳಿ, ಪ್ರಶಾಂತಕುಮಾರ ಬಳ್ಳಿರಿಮಠ, ಕವಿತಾ ಮುಗಳಿ, ಚಂದ್ರಶೇಖರ ಮಠಪತಿ ಇತರರು ಇದ್ದರು.