ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ಯಾನಲ್ ವಕೀಲರಾದ ಆಶಾ ಕೆ.ಎಸ್. ಮಾತನಾಡಿ, ಇಂದು ಮಕ್ಕಳ ಮೇಲೆ ಅತಿ ಹೆಚ್ಚು ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ.
ಕನ್ನಡಪ್ರಭ ವಾರ್ತೆ ತುಮಕೂರು
ಕಾನೂನು ಎಂಬುದು ಒಂದು ಸಾಮಾನ್ಯ ಜ್ಞಾನ. ಕಾನೂನಿನ ಬಗ್ಗೆ ಪ್ರತಿಯೊಬ್ಬರೂ ಅರಿವು ಹೊಂದಿರಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸುನೀಲ್ ಎಸ್. ಹೊಸಮನಿ ಹೇಳಿದರು.ನಗರದ ಎಸ್‌ಐಟಿ ಕ್ಯಾಂಪಸ್‌ನಲ್ಲಿ ಶ್ರೀ ಕೃಷ್ಣ ವಿದ್ಯಾಸಂಸ್ಥೆ, ಶ್ರೀ ಕೃಷ್ಣ ಕಾನೂನು ಕಾಲೇಜು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಗಿಡಗಳಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನನ್ನು ಪ್ರತಿಯೊಬ್ಬರೂ ಅರಿತಿರಬೇಕು. ನಾವು ತಾಯಿಯ ಹೊಟ್ಟೆಯಲ್ಲಿ ಇರುವಾಗಲೇ ಕಾನೂನು ರಕ್ಷಣೆಯ ಹಕ್ಕನ್ನು ಪಡೆದುಕೊಂಡಿರುತ್ತೇವೆ. ಪ್ರತಿಯೊಬ್ಬರಿಗೂ ಈ ಹಕ್ಕು ತಾವು ಸಾಯುವವರೆಗೂ ಇರುತ್ತದೆ. ಭ್ರೂಣ ಪತ್ತೆ ಹಾಗೂ ಹತ್ಯೆ ಮಾಡುವುದು ಕಾನೂನು ಪ್ರಕಾರ ತಪ್ಪು. ಒಂದು ವೇಳೆ ಹಾಗೆ ಮಾಡಿದಲ್ಲಿ ಅವರು ಕಾನೂನಿನಲ್ಲಿ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಿದರು.ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ ಎಂದು ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ಕಾನೂನು ಒಳಗೊಂಡಂತೆ ತಮ್ಮ ವಚನದಲ್ಲಿ ಸಾಮಾನ್ಯ ಜ್ಞಾನವನ್ನು ತಿಳಿಸಿದ್ದಾರೆ. ಕಾನೂನು ಎನ್ನುವುದು ಒಂದು ಸಾಮಾನ್ಯ ಜ್ಞಾನ ಎಂದು ಅವರು ತಿಳಿಸಿದರು.
ಮೋಟಾರು ವಾಹನ ಕಾಯ್ದೆ, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ಕಾಯ್ದೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದ ಅವರು, ಕಾಯ್ದೆಯಿಂದ ಇರುವ ರಕ್ಷಣೆ ಹಾಗೂ ಶಿಕ್ಷೆ, ದಂಡದ ಬಗ್ಗೆ ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲೋಕೇಶ್ ಧನಪಾಲ್ ಹವಾಲೆ ಮಾತನಾಡಿ, ಬಾಲ್ಯ ವಿವಾಹವು ಕಾನೂನು ರೀತ್ಯ ಅಪರಾಧವಾಗಿದ್ದು, ಇದನ್ನು ತಡೆಗಟ್ಟಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಪ್ರತಿಯೊಬ್ಬರಿಗೂ ಕಾನೂನು ಅರಿವು- ನೆರವು ಮೂಡಿಸುವುದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹೊಣೆಯಾಗಿದೆ. ಇಲ್ಲಿ ಉಚಿತವಾಗಿ ಸಲಹೆಗಳನ್ನು ನೀಡಲಾಗುತ್ತದೆ. ಕಾನೂನಿನ ಅವಶ್ಯಕತೆ ಯಾರಿಗೆಲ್ಲ ಇದೆಯೋ ಅವರಿಗೆಲ್ಲ ನೆರವು ನೀಡುವ ಉದ್ದೇಶ ನಮ್ಮ ಪ್ರಾಧಿಕಾರದ್ದಾಗಿದೆ. ಎಲ್ಲರೂ ಇದರ ನೆರವನ್ನು ಪಡೆಯಬೇಕು ಎಂದು ತಿಳಿಸಿದರು.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ಯಾನಲ್ ವಕೀಲರಾದ ಆಶಾ ಕೆ.ಎಸ್. ಮಾತನಾಡಿ, ಇಂದು ಮಕ್ಕಳ ಮೇಲೆ ಅತಿ ಹೆಚ್ಚು ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಅದರಲ್ಲೂ ನೂರಕ್ಕೆ ಎಂಬತ್ತು ಪ್ರತಿಶತ ಗಂಡು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿವೆ. ಹೆಣ್ಣು ಮಕ್ಕಳ ಮೇಲೆ ನಡೆದಂತಹ ಪ್ರಕರಣಗಳು ಮಾತ್ರ ನೋಂದಣಿಯಾಗುತ್ತಿವೆ. ಆದರೆ, ಗಂಡು ಮಕ್ಕಳ ಮೇಲೆ ಅದರಲ್ಲೂ ಹದಿನೈದು ವರ್ಷದೊಳಗಿನ ಮಕ್ಕಳ ಮೇಲೆ ಅತಿ ಹೆಚ್ಚು ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದರೂ ಸಹ ಯಾರೂ ಪ್ರಕರಣ ನೋಂದಣಿ ಮಾಡಲು ಮುಂದಾಗುವುದಿಲ್ಲ. ಕಾರಣ ಇಷ್ಟೇ, ಮರ್ಯಾದೆ ಪ್ರಶ್ನೆ. ಭವಿಷ್ಯದ ಸಮಾಜದಲ್ಲಿ ಶಾಂತಿ- ನೆಮ್ಮದಿಯಿಂದ ಬದಕಲು ಕಷ್ಟವಾಗುತ್ತದೆ ಎಂಬ ಉದ್ದೇಶದಿಂದ ನೋಂದಣಿ ತುಂಬಾ ಕಡಿಮೆ. ಈ ಕುರಿತು ಕಾನೂನು ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.ಅತಿಥಿಗಳಾಗಿ ಆಗಮಿಸಿದ್ದ ತುಮಕೂರು ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಸೌಮ್ಯ ಜಿ.ಎಲ್., ಬಾಲ್ಯವಿವಾಹ, ಪೋಕ್ಸೋ ಕಾಯ್ದೆ ಅಡಿಯಲ್ಲಿ ಶಿಕ್ಷೆಗೊಳಗಾದವರು ಶಿಕ್ಷಣದಿಂದ ವಂಚಿತರಾಗುತ್ತಾರೆ. ಇದರಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಶಿಕ್ಷಣದತ್ತ ಹೆಚ್ಚಿನ ಗಮನಕೊಡಿ. ಮೊಬೈಲ್, ಮೀಡಿಯಾಗಳಲ್ಲಿ ತೋರಿಸುವ ಅಶ್ಲೀಲ ಚಿತ್ರಗಳನ್ನು ನೋಡಿ ಪ್ರಚೋದಿತರಾಗಿ ಅಪರಾಧಗಳನ್ನು ಎಸಗಿದರೆ ಕಾನೂನಿಡಿಯಲ್ಲಿ ಶಿಕ್ಷೆಗೊಳಬೇಕಾಗುತ್ತದೆ. ಕಾನೂನು ಎನ್ನುವುದು ಎಲ್ಲರಿಗೂ ಒಂದೇಯಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಹಿರಿಯ ವಕೀಲರಾದ ಮರಿಚನ್ನಮ್ಮ ಮಾತನಾಡಿ, ಕಾನೂನನ್ನು ಎಲ್ಲರೂ ಸರಿಯಾಗಿ ತಿಳಿಯಬೇಕು ಹಾಗೂ ಪಾಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಸಮಾರಂಭದಲ್ಲಿ ಎನ್‌ಸಿಸಿ ಮುಖ್ಯಸ್ಥ ಅನಿಲ್‌ಕುಮಾರ, 4 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಜೆಸಿಒ ಯೋಗೀಶ್ ಕೆ.ಡಿ., ಶ್ರೀ ಕೃಷ್ಣ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನೆಟ್ ವಿಮಲ, ಆಯುಷ್ಮಾನ್ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಮಂಜುಳಾ, ಸಹ ಪ್ರಾಧ್ಯಾಪಕರಾದ ರಾಜೇಶ್ವರಿ, ಸುಮಿತ್ರಾ ಪಾಟೀಲ್, ಸ್ವಾತಿ ಮತ್ತಿತರರು ಉಪಸ್ಥಿತರಿದ್ದರು.
ಕೃಷ್ಣ ಕಾನೂನು ಕಾಲೇಜಿನ ವಿದ್ಯಾರ್ಥಿ ಲಕ್ಷ್ಮಿ ಪ್ರಾರ್ಥಿಸಿದರು. ಎನ್‌ಸಿಸಿ ವಿದ್ಯಾರ್ಥಿಗಳು, ಶ್ರೀ ಕೃಷ್ಣ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಶರತ್ ತಂಡದ ವತಿಯಿಂದ ಬಾಲ್ಯ ವಿವಾಹ ಕುರಿತು ಕಾನೂನು ಅರಿವು ಮೂಡಿಸುವ ನಾಟಕವನ್ನು ಪ್ರದರ್ಶಿಸಲಾಯಿತು.
