ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎಂ.ಎಸ್. ಡಬ್ಲ್ಯು ವಿದ್ಯಾರ್ಥಿಗಳು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿಶ್ ಮಹಿಳಾ ಸಬಲೀಕರಣ ಅರಿವು ಕಾರ್ಯಕ್ರಮದಲ್ಲಿ ಏರ್ಪಡಿಸಲಾಯಿತು.
ಉಡುಪಿ: ಮಹಿಳಾ ಪರ ಹಲವಾರು ಕಾಯ್ದೆಗಳು ಈಗಾಗಲೇ ಜಾರಿಯಲ್ಲಿದ್ದರೂ ಅರಿವಿನ ಕೊರತೆಯಿಂದ ಇದನ್ನು ಸಂಪೂರ್ಣ ಜಾರಿಯಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಪ್ರದೇಶದ ಬಡ ಜನರಿಗಾಗಿ ಉಚಿತ ಕಾನೂನು ಸೇವೆಗಳನ್ನು ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲ ವಿನಯ ಹೇಳಿದರು.
ಉಪ್ಪೂರು ಗ್ರಾಪಂ ವ್ಯಾಪ್ತಿಯ ಜ್ಞಾನ ಸಂಜೀವಿನಿ ಒಕ್ಕೂಟದ ಸದಸ್ಯರಿಗಾಗಿ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎಂ.ಎಸ್. ಡಬ್ಲ್ಯು ವಿದ್ಯಾರ್ಥಿಗಳು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ ಮಹಿಳಾ ಸಬಲೀಕರಣ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಎಂಎಸ್ ಡಬ್ಲ್ಯು ವಿಭಾಗ ಮುಖ್ಯಸ್ಥೆ ಸುಷ್ಮಾ ಟಿ. ಮಾತನಾಡಿ, ಮಹಿಳೆಯರು ಸಮಾಜದ ಪ್ರಮುಖ ಅಂಗವಾಗಿದ್ದಾರೆ. ಕುಟುಂಬ, ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೂ ಇನ್ನೂ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. 2011ರ ಜನಗಣತಿ ಪ್ರಕಾರ ಪುರುಷರ ಸಾಕ್ಷರತಾ ಪ್ರಮಾಣ ಶೇ. 82.14 ಆಗಿದೆ. ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ. 65.46 ಆಗಿದೆ. ಈ ಅಂಕಿ ಅಂಶಗಳು ಮಹಿಳಾ ಸಬಲೀಕರಣದ ಅಗತ್ಯವನ್ನು ಸೂಚಿಸುತ್ತವೆ. ಹೊಸ ವಿಷಯಗಳನ್ನು ನಾವು ಕಲಿಯೋಣ, ಇನ್ನೊಬ್ಬರಿಗೆ ತಿಳಿಸುತ್ತಾ ಸಬಲರಾಗೋಣ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಗಾಯತ್ರಿ ವಹಿಸಿಕೊಂಡಿದ್ದು, ವೇದಿಕೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ಯಾರಾಲೀಗಲ್ ಸ್ವಯಂಸೇವಕಿ ತಿಲೋತಮ ನಾಯಕ್, ಜ್ಞಾನ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುನೀತಾ, ಜ್ಞಾನ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ಸುನಂದಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಪ್ರಥಮ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳಾದ ದೀಕ್ಷಿತಾ ಎ.ಆರ್., ವಜ್ರೇಶ್ ಆಚಾರ್ಯ, ಸುಜನ್ ಮತ್ತು ವಾತ್ಸಲ್ಯ ಆಯೋಜಿಸಿದ್ದರು.