ಸಾರಾಂಶ
- ಪೋಕ್ಸೋ-ಬಾಲ್ಯವಿವಾಹ ತಡೆ ಕಾನೂನು ಅರಿವು-ನೆರವು ಕಾರ್ಯಕ್ರಮ
- - - ಕನ್ನಡಪ್ರಭ ವಾರ್ತೆ ದಾವಣಗೆರೆ ಬಾಲಕರ ಮತ್ತು ಅಲ್ಪವಯಸ್ಕರ ಬಗೆಗಿನ ಕಾನೂನು ತಿಳಿಯುವುದು ಎಲ್ಲರ ಜವಾಬ್ದಾರಿ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಣ್ಣಯ್ಯನವರ್ ಹೇಳಿದರು.
ನಗರದ ಅಮೃತ ವಿದ್ಯಾಲಯಂ ಶಾಲೆ ಸಭಾಂಗಣದಲ್ಲಿ ಸೋಮವಾರ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಮತ್ತು ಅಮೃತ ವಿದ್ಯಾಲಯಂ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಕ್ಸೋ ಮತ್ತು ಬಾಲ್ಯವಿವಾಹ ತಡೆಯುವ ಬಗ್ಗೆ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿ, ವಿದ್ಯಾರ್ಥಿನಿಯರ ತಂದೆ- ತಾಯಿಯರು ಮಕ್ಕಳನ್ನು ಶಾಲೆಗೆ ಕಳುಹಿಸಿದ ನಂತರ ಅವರ ಬಗ್ಗೆ ಕಾಳಜಿ ವಹಿಸುವುದು ಅವಶ್ಯವಾಗಿದೆ. ಕಾನೂನಿನ ಸಂಘರ್ಷಕ್ಕೆ ಒಳಗಾದರೆ ಆರ್ಥಿಕ, ಸಾಮಾಜಿಕ, ಭೌತಿಕವಾಗಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದರು.
ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್ ಮಾತನಾಡಿ, ಮಕ್ಕಳಿಗೆ ನೈತಿಕ ಶಿಕ್ಷಣ ಅವಶ್ಯಕತೆ ಇದೆ. ಮಕ್ಕಳು ಮೊಬೈಲ್‌ಗಳಲ್ಲಿ ಅವಶ್ಯಕತೆಗಿಂತ ಅನಾವಶ್ಯಕ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿದ್ದಾರೆ. ಆದ್ದರಿಂದ ಪೋಷಕರು ಈ ಬಗ್ಗೆ ಹೆಚ್ಚು ಗಮನಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು. ಪೋಕ್ಸೋ ಕಾನೂನು ಮತ್ತು ಬಾಲ್ಯವಿವಾಹ ನಿಷೇಧ ಕಾನೂನು ಬಗ್ಗೆ ಮಾಹಿತಿ ನೀಡಿದ ಅವರು, ಇಲಾಖೆಗಳ ಜೊತೆಗೆ ಮಕ್ಕಳು, ಪೋಷಕರು ಮತ್ತು ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಕಾನೂನಿನ ಅನುಷ್ಠಾನ ಸುಲಭ ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಪುಷ್ಪಲತಾ ಮಾತನಾಡಿ, ಪಠ್ಯ ವಿಷಯದ ಜೊತೆಗೆ ಸಾಮಾಜಿಕ ಮೌಲ್ಯಗಳು ಮತ್ತು ದಿನಬಳಕೆ ಕಾನೂನುಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು ಶಿಕ್ಷಕರ ಮತ್ತು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಮಹಿಳಾ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎಸ್.ಡಿ. ನೂರ್ ಅಹಮ್ಮದ್ ಮಾತನಾಡಿ ಸಾರ್ವಜನಿಕರು ಪೊಲೀಸರಿಗೆ ಸೂಕ್ತ ಸಮಯದಲ್ಲಿ ಸರಿಯಾದ ಮಾಹಿತಿ ನೀಡಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿದರು.ಕಾರ್ಯಕ್ರದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್.ಕವಿತಾ, ಅಮೃತ ವಿದ್ಯಾಲಯಂ ಪ್ರಾಚಾರ್ಯರಾದ ಎನ್. ಪ್ರತಿಭಾ, ಅಮೃತ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಎನ್.ಸಿ. ವಿವೇಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
- - - -23ಕೆಡಿವಿಜಿ38ಃ:ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಪೋಕ್ಸೋ ಮತ್ತು ಬಾಲ್ಯ ವಿವಾಹ ತಡೆಯುವ ಬಗ್ಗೆ ಕಾನೂನು ಅರಿವು- ನೆರವು ಕಾರ್ಯಕ್ರಮವನ್ನು ನ್ಯಾಯಾಧೀಶ ಅಣ್ಣಯ್ಯನವರ್ ಉದ್ಘಾಟಿಸಿದರು.