ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು, ಬಾಲ್ಯವಿವಾಹ ನಿರ್ಮೂಲನೆ ಮಾಡಲು ಮಕ್ಕಳಲ್ಲಿ ಕಾನೂನಿನ ಅರಿವು ಹಾಗೂ ಶಿಕ್ಷಣದ ಮಹತ್ವ ಮೂಡಿಸುವುದು ಅಗತ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು, ಬಾಲ್ಯವಿವಾಹ ನಿರ್ಮೂಲನೆ ಮಾಡಲು ಮಕ್ಕಳಲ್ಲಿ ಕಾನೂನಿನ ಅರಿವು ಹಾಗೂ ಶಿಕ್ಷಣದ ಮಹತ್ವ ಮೂಡಿಸುವುದು ಅಗತ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.ಕಲಬುರಗಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ದೆಹಲಿಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಹಾಗೂ ಸೇಂಟ್ ಮೇರಿಸ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪೋಕ್ಸೊ ಕಾಯ್ದೆ ಮತ್ತು ಬಾಲ್ಯವಿವಾಹ ನಿಷೇಧ ಕಾನೂನಿನ ಕುರಿತು ಕಾನೂನು ನೆರವು ಹಾಗೂ ಅರಿವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಇಂದಿಗೂ ನಡೆಯುತ್ತಿವೆ. ಇಂತಹ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಲು, ಅನ್ಯಾಯ ಸಹಿಸದೆ ಅದನ್ನು ಪ್ರಶ್ನಿಸಲು ಹೆಣ್ಣುಮಕ್ಕಳು ಧೈರ್ಯ ಬೆಳೆಸಿಕೊಳ್ಳಬೇಕು. ಇದಕ್ಕೆ ಶಿಕ್ಷಣದ ಜತೆಗೆ ಕಾನೂನಿನ ಅರಿವು ಕೂಡ ಅತ್ಯಂತ ಮುಖ್ಯ. ಪ್ರತಿಯೊಬ್ಬ ಮಗುವಿನ ಬದುಕಿನಲ್ಲಿ ಜ್ಞಾನ ಮತ್ತು ಅರಿವಿನ ದೀಪ ಬೆಳಗಬೇಕು. ಆಗ ಮಾತ್ರ ಮಕ್ಕಳು ತಮ್ಮ ಹಕ್ಕುಗಳನ್ನು ಅರಿತುಕೊಂಡು, ಸಂಕಷ್ಟದ ಸಂದರ್ಭಗಳಲ್ಲಿ ಸೂಕ್ತ ನಿರ್ಧಾರಗಳ ತೆಗೆದುಕೊಳ್ಳಲು ಸಾಧ್ಯ ಎಂದು ತಿಳಿಸಿದರು.ಹದಿಹರೆಯದಲ್ಲಿ ಪ್ರೀತಿ, ಆಕರ್ಷಣೆ ಸಹಜ. ಆದರೆ, ಆ ವಯಸ್ಸಿನಲ್ಲಿ ತಮ್ಮ ನಿರ್ಧಾರಗಳ ಪರಿಣಾಮಗಳು ಹಾಗೂ ಭವಿಷ್ಯದ ಮೇಲೆ ಅವು ಬೀರುವ ಪ್ರಭಾವದ ಬಗ್ಗೆ ಸಂಪೂರ್ಣ ಅರಿವು ಇರುವುದಿಲ್ಲ. ವಿದ್ಯಾರ್ಥಿಗಳು ತಮ್ಮ ವಯಸ್ಸು, ಶಿಕ್ಷಣ ಮತ್ತು ಭವಿಷ್ಯದ ಗುರಿಗಳಿಗೆ ಆದ್ಯತೆ ನೀಡಬೇಕು. ಭಾವನೆಗಳಿಗೆ ಒಳಗಾಗಿ ಶಿಕ್ಷಣದಿಂದ ದೂರವಾಗದೆ, ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಮಕ್ಕಳು ಪೋಕ್ಸೊ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾನೂನು ಹಾಗೂ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಯಾರಾದರೂ ದೌರ್ಜನ್ಯ ಎಸಗಿದರೆ ಅಥವಾ ಬಾಲ್ಯವಿವಾಹಕ್ಕೆ ಒತ್ತಾಯಿಸಿದರೆ ಮೌನವಾಗಿರದೆ ಪೋಷಕರು, ಶಿಕ್ಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಕಾನೂನಿನ ಅರಿವು ಮಕ್ಕಳಿಗೆ ರಕ್ಷಣೆ ನೀಡುವುದರ ಜತೆಗೆ ಆತ್ಮವಿಶ್ವಾಸದಿಂದ ಬದುಕುವ ಶಕ್ತಿಯನ್ನೂ ನೀಡುತ್ತದೆ ಎಂದು ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದರು.ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು, ಅವರ ಶಿಕ್ಷಣವನ್ನು ಮುಂದುವರಿಸುವುದು ಹಾಗೂ ಬಾಲ್ಯವಿವಾಹ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಕರೆ ನೀಡಿದರು.
ಜಿಲ್ಲೆಯಲ್ಲಿ 66 ಬಾಲ್ಯ ವಿವಾಹ: ಚೌಧರಿ: ಕಲಬುರಗಿ ಜಿಲ್ಲೆಯಲ್ಲಿ ಈ ವರ್ಷ 66 ಬಾಲ್ಯವಿವಾಹಗಳು ನಡೆದಿರುವುದು ಆತಂಕಕಾರಿ. ಬಡತನ, ಆರ್ಥಿಕ ಸಂಕಷ್ಟ ಹಾಗೂ ಹೆಣ್ಣುಮಕ್ಕಳು ದೊಡ್ಡವರಾಗಿದ್ದಾರೆ, ಬೇಗ ಮದುವೆ ಮಾಡಿಬಿಡೋಣ ಎಂಬ ಮನೋಭಾವ ಬಾಲ್ಯವಿವಾಹಕ್ಕೆ ಕಾರಣವಾಗುತ್ತವೆ. ಆದರೆ, ಮದುವೆಯೇ ಪರಿಹಾರವಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಿ, ಉತ್ತಮ ಶಿಕ್ಷಣ ನೀಡುವ ಮೂಲಕ ಸ್ವಾವಲಂಬಿಗಳನ್ನಾಗಿ ಬೆಳೆಸಬೇಕು. ತಮ್ಮ ಬದುಕಿನ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವ ಶಕ್ತಿಯನ್ನು ಮಕ್ಕಳಲ್ಲಿ ಬೆಳೆಸಿದಾಗ ಮಾತ್ರ ನಿಜವಾದ ಸಬಲೀಕರಣ ಸಾಧ್ಯ ಎಂದು ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.