ಸಾರಾಂಶ
ಮನುಷ್ಯನು ಭ್ರೂಣದಿಂದ ಸಾಯುವವರೆಗೂ ಕಾನೂನಿನ ಅಡಿಯೇ ಬದುಕಬೇಕಾಗಿದೆ, ಕಾನೂನು ಪಾಲಿಸುವವರನ್ನು ಕಾನೂನು ರಕ್ಷಿಸುತ್ತದೆ. ಕಾನೂನು ವಿರೋಧಿ ಕೃತ್ಯಗಳು ಕಂಡುಬಂದಾಗ ಅದರ ವಿರುದ್ಧ ಧ್ವನಿಯೆತ್ತಬೇಕು ಹಾಗೂ ಪೊಲೀಸರಿಗೆ ಮಾಹಿತಿ ನೀಡಬೇಕು
ಕನ್ನಡಪ್ರಭ ವಾರ್ತೆ ಕೋಲಾರಮನುಷ್ಯನ ಜೀವನದಲ್ಲಿ ಇಂದು ಆಹಾರ, ನೀರಿನಷ್ಟೇ ಕಾನೂನು ಅತಿ ಮುಖ್ಯವಾಗಿದ್ದು, ದೈನಂದಿನ ಬದುಕಿಗೆ ಅಗತ್ಯವಾದ ಕನಿಷ್ಠ ಕಾನೂನುಗಳ ಅರಿವು ಪಡೆಯುವ ಮೂಲಕ ನೆಮ್ಮದಿಯ ಜೀವನ ನಡೆಸಬಹುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕಿನ ಕುಂಬಾರಹಳ್ಳಿಯ ಸಿ.ಮುನಿಸ್ವಾಮಿ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜೀವನಪೂರ್ತಿ ಕಾನೂನು ಪಾಲನೆ
ಮನುಷ್ಯನು ಭ್ರೂಣದಿಂದ ಸಾಯುವವರೆಗೂ ಕಾನೂನಿನ ಅಡಿಯೇ ಬದುಕಬೇಕಾಗಿದೆ, ಕಾನೂನು ಪಾಲಿಸುವವರನ್ನು ಕಾನೂನು ರಕ್ಷಿಸುತ್ತದೆ ಎಂದ ಅವರು, ಇತ್ತೀಚೆಗೆ ಭ್ರೂಣಲಿಂಗ ಪತ್ತೆ, ಹೆಣ್ಣುಭ್ರೂಣ ಹತ್ಯೆಯಂತಹ ಅಪರಾಧಗಳು ಹೆಚ್ಚಾಗುತ್ತಿದ್ದು, ಇದರ ವಿರುದ್ಧ ನೀವು ಧ್ವನಿಯೆತ್ತಬೇಕು, ಪೊಲೀಸರಿಗೆ ತಿಳಿಸಬೇಕು . ಸಮಾಜಕ್ಕೆ ಹಾಗೂ ಯುವಪೀಳಿಗೆಗೆ ಕಂಟಕವಾಗಿರುವ ಮಾದಕದ್ರವ್ಯ ವ್ಯಸನದಿಂದ ದೂರ ಮಾಡಲು ವಿದ್ಯಾರ್ಥಿಗಳಿಗೆ ಅರಿವು ನೀಡುವ ಕೆಲಸ ಮಾಡಲಾಗುತ್ತಿದೆ. ಕಾಲೇಜಿನ ಆವರಣದಲ್ಲಿ ಅಥವಾ ಎಲ್ಲೇ ಆಗಲಿ ಮಾದಕ ವಸ್ತುಗಳ ಸಾಗಣೆ, ಮಾರಾಟ ಕಂಡು ಬಂದರೆ ಪೊಲೀಸರಿಗೆ ದೂರು ನೀಡಬೇಕು ಎಂದು ಕಿವಿಮಾತು ಹೇಳಿದರು.ಶಾಲೆಗಳ ಬಳಿ ತಂಬಾಕು ಮಾರುವಂತಿಲ್ಲ
ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ಶಾಲಾ ಕಾಲೇಜುಗಳಿಂದ ೨೦೦ ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ಕಾಯಿದೆಯಡಿ ನಿಷೇಧಿಸಲಾಗಿದ್ದು, ಪ್ರತಿ ಶಾಲೆ, ಕಾಲೇಜು ಬಳಿ ನಿಷೇಧದ ಕುರಿತು ಫಲಕ ಹಾಕುವುದು ಕಡ್ಡಾಯವಾಗಿದೆ ಎಂದರು. ಕಾನೂನಿನ ಅರಿವಿಲ್ಲದೇ ಅಪರಾಧ ಮಾಡಿದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ನಿತ್ಯ ಜೀವನದಲ್ಲಿ ಅಗತ್ಯವಾದ ಕಾನೂನುಗಳ ಅರಿವು ಇದ್ದರೆ ನೆಮ್ಮದಿಯ ವಿವಾದ ರಹಿತ ಜೀವನ ನಡೆಸಬಹುದು ಎಂದರು.ಬಾಲ್ಯವಿವಾಹ ಸಮಾಜಕ್ಕೆ ಕಂಟಕವಾಗಿದೆ. ಇದರ ಸಂಪೂರ್ಣ ತಡೆಗೆ ವಿದ್ಯಾರ್ಥಿ ಸಯುದಾಯದ ಸಹಕಾರ ಅಗತ್ಯವಿದೆ, ನಿಮ್ಮ ಸುತ್ತಮುತ್ತ ಬಾಲ್ಯವಿವಾಹ ಆಗುತ್ತಿದ್ದರೆ ನೀವು ಕೂಡಲೇ ಶಾಲೆಯ ಮುಖ್ಯಶಿಕ್ಷಕರಿಗೆ ತಿಳಿಸಬೇಕು. ಸಹಾಯವಾಣಿಗೂ ಕರೆ ಮಾಡಬೇಕು ಎಂದು ಸಲಹೆ ನೀಡಿದರು. ಕಾಯ್ದೆಗಳ ಕುರಿತ ಉಪನ್ಯಾಸ
ವಕೀಲ ಆರ್.ರಘುಪತಿಗೌಡ, ಬಾಲ್ಯವಿವಾಹ ನಿಷೇಧ ಕಾಯಿದೆ, ಬಾಲಕಾರ್ಮಿಕ ಪದ್ಧತಿ ವಿರೋಧಿ ಕಾಯಿದೆ ಹಾಗೂ ಹಿರಿಯ ನಾಗರಿಕರ ಸಂರಕ್ಷಣಾ ಕಾಯಿದೆ ಕುರಿತು ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಎನ್‌ಎಎಲ್‌ಎಸ್‌ಎ ಸಹಾಯವಾಣಿ ೧೫೧೦೦ ಕುರಿತು ಮಾಹಿತಿ ನೀಡಲಾಯಿತು, ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಶಾಲೆಯ ನಿರ್ದೇಶಕ ಸಿ.ಮಲ್ಲಿಕಾರ್ಜುನ, ಶಿಕ್ಷಣ ಸಂಯೋಜಕ ರಾಘವೇಂದ್ರ, ಮುಖ್ಯಶಿಕ್ಷಕ ಎಂ.ಜಿ.ಸುರೇಶ್ ಇದ್ದರು.