ಕಾನೂನು ಅರೆಕಾಲಿಕ ಸ್ವಯಂ ಸೇವಕರಿಗೆ ನಾಲ್ಕು ದಿನಗಳ ತರಬೇತಿ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಒದಗಿಸಲು ಕಾನೂನು ಅರಿವು ಅತ್ಯಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ರಾಜೇಶ್ವರಿ ಎನ್.ಹೆಗಡೆ ಹೇಳಿದರು.ನಗರದ ಜಿಪನಲ್ಲಿ ಬುಧವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕಾನೂನು ಅರೆಕಾಲಿಕ ಸ್ವಯಂ ಸೇವಕರಿಗೆ ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಬಹುತೇಕರಿಗೆ ಕಾನೂನು ಸೌಲಭ್ಯಗಳ ಬಗ್ಗೆ ಮಾಹಿತಿಯೇ ಇಲ್ಲ. ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ನ್ಯಾಯ ನೀಡಿದೆ. ಆದರೆ ಶಿಕ್ಷಣದ ಕೊರತೆ ಮತ್ತು ಅರಿವಿಲ್ಲದ ಕಾರಣ ಅನೇಕರು ನ್ಯಾಯದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಜನರಿಗೆ ಕಾನೂನು ಸೇತುವೆಯಾಗಿ ಕೆಲಸ ಮಾಡುವುದು ಅರೆಕಾಲಿಕ ಸ್ವಯಂಸೇವಕರ ಆದ್ಯ ಕರ್ತವ್ಯ ಎಂದು ತಿಳಿಸಿದರು.ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಪರಿಹಾರ ಪಡೆಯುವ ಹಕ್ಕಿನ ಬಗ್ಗೆ ಉದಾಹರಣೆ ನೀಡಿದ ನ್ಯಾಯಾಧೀಶರು, ಒಬ್ಬ ವ್ಯಕ್ತಿಗೆ ಕಾನೂನಿನ ಅರಿವಿದ್ದರೆ ಮಾತ್ರ ಆತ ತನಗೆ ಸಂಭವಿಸಿದ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಧ್ಯ. ಇಲ್ಲ ದಿದ್ದರೆ ಆತ ಕಾನೂನು ಸೌಲಭ್ಯಗಳಿಂದ ದೂರವೇ ಉಳಿಯುತ್ತಾನೆ. ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಕಾನೂನು ನೆರವು ನೀಡಲು 1987ರ ಕಾನೂನು ಸೇವೆಗಳ ಕಾಯ್ದೆಯಡಿ ಕಾನೂನು ಸೇವಾ ಪ್ರಾಧಿಕಾರ ಅಸ್ವಿತ್ವಕ್ಕೆ ಬಂದಿವೆ ಎಂದರು.ಜನರಿಗೆ ಕಾನೂನಿನ ಅರಿವು ಮೂಡಿಸುವುದು ಮತ್ತು ನೆರವು ಬೇಕಾದವರನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಬಳಿ ಕರೆತರುವುದು ಕಾನೂನು ಅರೇಕಾಲಿಕ ಸ್ವಯಂ ಸೇವಕರ ಜವಾಬ್ದಾರಿ ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ, ನ್ಯಾಯಾಧೀಶರಾದ ಕುಲಕರ್ಣಿ, ಪ್ರಕಾಶ್, ಔಟ್‌ಲಾಡ್ ಇಂಡಿಯಾ ಫೌಂಡೇಶನ್ ತರಬೇತುದಾರರಾದ ಕೆ.ವಂದನಾ, ಎಸ್.ತುಶಿತಾ ಮೊದಲಾದವರಿದ್ದರು.--ಫೋಟೋ
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರೆ ಕಾಲಿಕ ಸ್ವಯಂ ಸೇವಕರಿಗೆ ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ರಾಜೇಶ್ವರಿ ಎನ್.ಹೆಗಡೆ ಉದ್ಘಾಟಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಸೇರಿದಂತೆ ಮೊದಲಾದವರಿದ್ದರು.