ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುಪಟ್ಟಣದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯ ಅಂಗವಾಗಿ ಪದವಿ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಿತ್ತು.ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ನಂಜನಗೂಡು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಡಿ. ಕಮಲಾಕ್ಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ದೇಶದ ಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊಡಮಾಡುವ ಹಲವಾರು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ನಾಗರೀಕರು ತಮ್ಮ ಇತಿಮಿತಿಗಳು, ಜವಾಬ್ದಾರಿ ಮತ್ತು ಹಕ್ಕುಗಳನ್ನು ತಿಳಿದು ಕರ್ತವ್ಯ ನಿರ್ವಹಿಸಬೇಕಾದಲ್ಲಿ ನ್ಯಾಯದ ಅರ್ಥ ಎಂದರು.ನ್ಯಾಯದ ಪರಿಪಾಲನೆಯಲ್ಲಿರ ಬೇಕಾದ ಪ್ರಾಮಾಣಿಕತೆ, ಶಿಸ್ತು, ಕಳಕಳಿ ಮುಂತಾದ ಪೂರಕ ಅಂಶಗಳನ್ನರಿತು ಸರ್ವರಿಗೂ ನ್ಯಾಯ ಎಂಬ ನ್ಯಾಯತತ್ವವನ್ನು ಮನಗಂಡು ವಿದ್ಯಾಭ್ಯಾಸ ಮಾಡಬೇಕು ಎಂದರು.ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಜಿ. ಸತೀಶ್ ಮಾತನಾಡಿ, ಶಾಸನ ಬದ್ಧವಾಗಿ ರೂಪಿತವಾಗಿರುವ ವಿವಿಧ ರೀತಿಯ ಕಾನೂನುಗಳನ್ನು ಪ್ರತಿಯೊಬ್ಬ ನಾಗರೀಕನೂ ಗೌರವಿಸುವ ಮುಖೇನಜಾತಿ, ಮತ, ಲಿಂಗ ಭೇದವೆಂಬ ತಾರತಮ್ಯ ಮಾಡದೇ ಸರ್ವರೂ ಸಮವಾಗಿ ಬಾಳಬೇಕೆಂಬ ಪರಿಕಲ್ಪನೆಯ ನ್ಯಾಯದ ಮಹತ್ವವನ್ನರಿಯಬೇಕೆಂದು ತಿಳಿಸಿದರು.ಹಿರಿಯ ವಕೀಲ ಮಹೇಶ್ ಪಿ. ಅತ್ತಿಖಾನೆ ರ್ಯಾ ಗಿಂಗ್ ಪಿಡುಗಿನ ಬಗ್ಗೆ ನಿದರ್ಶನಗಳ ಮುಖೇನ ವಿಸ್ತ್ರುತವಾದ ಮಾಹಿತಿ ಹಂಚಿಕೊಂಡರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ ಮಾತನಾಡಿ, ನ್ಯಾಯವೇ ದೇವರು, ನ್ಯಾಯಾಲಯವೇ ದೇಗುಲವೆಂಬಂತೆ ಗುರು-ಶಿಷ್ಯರ ಸಂಬಂಧ ಉತ್ತಮವಾಗಿರಬೇಕೆಂದಾದಲ್ಲಿ ಮಾಡಿದ ತಮ್ಮನ್ನು ತಿದ್ದಿಕೊಂಡು ನಡೆದು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ ಅವರಂತಹ ಆದರ್ಶನಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಗರೀಕರಂತೆ ಬದುಕುವ ದಾರಿಯೇ ಸಾಮಾಜಿಕ ನ್ಯಾಯದ ಪರಿಕಲ್ಪನೆಯಾಗಿದೆ ಎಂದು ಅಭಿಪ್ರಾಯಪಟ್ಟರು.ವಕೀಲರ ಸಂಘದ ಮಹದೇವಸ್ವಾಮಿ, ಉಪಾಧ್ಯಕ್ಷರಾದ ಕೆಂಪರಾಜು, ಪ್ರಧಾನ ಕಾರ್ಯದರ್ಶಿ ಎಂ.ಕೆ. ಬಸವಣ್ಣ, ಕಚೇರಿ ಅಧೀಕ್ಷಕ ಕೆ.ವಿ. ಸುಂದರರಾಜು, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಚ್.ಎಸ್. ಪರಶಿವ ಇದ್ದರು.