ಕನ್ನಡಪ್ರಭ ವಾರ್ತೆ ಮುಧೋಳಈ ಭಾಗದಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪನೆಗೆ ಕಾನೂನಿನ ಪ್ರಕಾರ ಅವಕಾಶವಿಲ್ಲ ಆದರೂ ಜೆ.ಕೆ. ಸಿಮೆಂಟ್ ಮಾಲೀಕರು ತಮ್ಮ ಪ್ರಭಾವ ಬಳಸಿ ದಲ್ಲಾಳಿಗಳ ಮೂಲಕ ರೈತರಿಗೆ ಮೋಸ ಮಾಡಿದ್ದಾರೆ. ಈ ಅನ್ಯಾಯದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ ಎಂದು ಜಮಖಂಡಿಯ ಪರಿಸರ ಸಂರಕ್ಷಣೆಯ ಹಿರಿಯ ನ್ಯಾಯವಾದಿ ಎನ್.ಎಸ್.ದೇವರವರ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಈ ಭಾಗದಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪನೆಗೆ ಕಾನೂನಿನ ಪ್ರಕಾರ ಅವಕಾಶವಿಲ್ಲ ಆದರೂ ಜೆ.ಕೆ. ಸಿಮೆಂಟ್ ಮಾಲೀಕರು ತಮ್ಮ ಪ್ರಭಾವ ಬಳಸಿ ದಲ್ಲಾಳಿಗಳ ಮೂಲಕ ರೈತರಿಗೆ ಮೋಸ ಮಾಡಿದ್ದಾರೆ. ಈ ಅನ್ಯಾಯದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ ಎಂದು ಜಮಖಂಡಿಯ ಪರಿಸರ ಸಂರಕ್ಷಣೆಯ ಹಿರಿಯ ನ್ಯಾಯವಾದಿ ಎನ್.ಎಸ್.ದೇವರವರ ಹೇಳಿದರು.ತಾಲೂಕಿನ ಮುದ್ದಾಪುರ ಗ್ರಾಮದ ಜೆಕೆ ಸಿಮೆಂಟ್ಸ್ ಗಣಿಗಾರಿಕೆ ವಿರುದ್ಧ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ನಾನು ಆರಂಭದಿಂದಲೂ ಈ ಕಾರ್ಖಾನೆಗೆ ಪರವಾನಿಗೆ ನೀಡಬಾರದೆಂದು ಹೋರಾಟ ನಡೆಸುತ್ತಿದ್ದು, ರೈತರ ಪರವಾಗಿ ಕಾನೂನು ಸಮರಕ್ಕೆ ಸಿದ್ಧರಾಗುವಂತೆ ಕರೆ ನೀಡಿದರು.
ಕಾನೂನಾತ್ಮಕ ಅಸ್ತ್ರ ಮತ್ತು ಸುಪ್ರೀಂ ಹೋರಾಟ: ಗಣಿಗಾರಿಕೆ ತಡೆಗೆ ಇರುವ ಕಾನೂನಾತ್ಮಕ ಅವಕಾಶಗಳನ್ನು ದೇವರ ವಿವರಿಸಿದರು. ಎಂಎಂಡಿಆರ್ ಕಾಯ್ದೆ 1957ರ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮತ್ತು ಪರಿಸರ ಸಂರಕ್ಷಣೆಗಾಗಿ ಯಾವುದೇ ಪ್ರದೇಶದಲ್ಲಿ ಗಣಿ ಗುತ್ತಿಗೆಯನ್ನು ರದ್ದುಪಡಿಸುವ ಅಥವಾ ಗಣಿಗಾರಿಕೆಯನ್ನು ನಿಷೇಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ರಾಷ್ಟ್ರೀಯ ಖನಿಜ ನೀತಿಯೂ ಭವಿಷ್ಯದ ಪೀಳಿಗೆಗೆ ಖನಿಜಗಳ ಲಭ್ಯತೆ ಖಾತರಿಪಡಿಸುವುದಕ್ಕೆ ಒತ್ತು ನೀಡಿದೆ. ಈ ಅಂಶಗಳನ್ನು ಆಧರಿಸಿ ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ನಡೆಸಲಾಗುವುದೆಂದು ತಿಳಿಸಿದ ಅವರು ತಂತ್ರಜ್ಞಾನ ಆಧಾರಿತ ಕಣ್ಗಾವಲಿಗೆ ಒತ್ತಾಯಿಸಿದ ಅವರು ಎರಡು ಪ್ರಮುಖ ಬೇಡಿಕೆ ಮಂಡಿಸಿದರು. ವಿವಾದಿತ ಪ್ರದೇಶವನ್ನು ತಕ್ಷಣವೇ ನೋ-ಮೈನಿಂಗ್ ಝೋನ್ ಅಥವಾ ಸೂಕ್ಷ್ಮ ಪರಿಸರ ವಲಯ ಎಂದು ಘೋಷಿಸಬೇಕು. ಕಾನೂನುಬಾಹಿರ ಗಣಿಗಾರಿಕೆ ತಡೆಯಲು ಉಪಗ್ರಹ ಆಧಾರಿತ ಮೈನಿಂಗ್ ಸರ್ವೆಲೆನ್ಸ್ ಸಿಸ್ಟಂ ಮೂಲಕ ಕಟ್ಟುನಿಟ್ಟಿನ ಕಣ್ಗಾವಲು ಕೈಗೊಳ್ಳಬೇಕೆಂದು ಆಗ್ರಹಿಸಿದರು.ತೀವ್ರಗೊಂಡ ರೈತರ ಹೋರಾಟ: ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಶಂಕರಗೌಡ ಹಿರೇಗೌಡ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹೋರಾಟ ತೀವ್ರಗೊಂಡಿದೆ. ತಾಲೂಕಿನ ಬೊಮ್ಮನಬುದ್ನಿ, ಹಲಕಿ, ನಿಂಗಾಪುರ, ಕಮಕೇರಿ, ಪೆಟ್ಲೂರ್, ಮುದ್ದಾಪುರ, ತಿಮ್ಮಾಪುರ, ಹೆಬ್ಬಾಳ ಮತ್ತು ಕನಸಗೇರಿ ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ಆರೋಪಿಸಿದ ಶಂಕರಗೌಡ ಹಿರೇಗೌಡ, ಪರಿಸರ ಇಲಾಖೆ ಅಧಿಕಾರಿಗಳು ತಪಾಸಣೆಗೆ ಬರುವ ಸಮಯ ನೋಡಿ ಕಾರ್ಖಾನೆ ಉತ್ಪಾದನೆ ಕಡಿತಗೊಳಿಸುತ್ತಿದೆ. ಧೂಳು ಮತ್ತು ಬೂದಿ ಹೊರಸೂಸುವಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಸುಳ್ಳು ವರದಿ ಸೃಷ್ಟಿಸುವ ಕುತಂತ್ರ ನಡೆಸಲಾಗುತ್ತಿದೆ ಎಂದು ಹೇಳಿದರು.ತಪಾಸಣಾ ಅಧಿಕಾರಿಗಳು ಕಾರ್ಖಾನೆಯ ವಾಹನಗಳಲ್ಲೇ ಸಂಚರಿಸುತ್ತಿದ್ದಾರೆ. ಅವರ ಅತಿಥಿ ಗೃಹಗಳಲ್ಲಿ ರಾಜಾತಿಥ್ಯ ಸ್ವೀಕರಿಸುತ್ತಿದ್ದಾರೆ. ಗಣಿಗಾರಿಕೆ ಅಧಿಕಾರಿಗಳು ಗೆಸ್ಟ್ ಹೌಸ್‌ನಲ್ಲೇ ಬೀಡುಬಿಟ್ಟಿದ್ದು, ಆರ್‌ಟಿಒ ಅಧಿಕಾರಿಗಳು ಬಂದಾಗ ಮಾತ್ರ ಓವರ್‌ಲೋಡ್ ಟಿಪ್ಪರ್‌ಗಳು ಕ್ರಮಬದ್ಧವಾಗಿ ಚಲಿಸುತ್ತಿವೆ. ಇದು ಅಧಿಕಾರಿಗಳು ಮತ್ತು ಕಾರ್ಖಾನೆಯ ನಡುವಿನ ಒಳ ಒಪ್ಪಂದವನ್ನು ತೋರಿಸುತ್ತದೆ ಎಂದು ಮುಖಂಡರು ಆರೋಪಿಸಿದರು.
ಪರಿಸರ ರಕ್ಷಣೆ ಮತ್ತು ರೈತರ ಹಿತದೃಷ್ಟಿಯಿಂದ ಮಾರಕ ಗಣಿಗಾರಿಕೆ ನಿಲ್ಲುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.ವಕೀಲ ವಿ.ವಿ.ತುಳಸಿಗೇರಿ, ಸುರೇಶ ಕಿವಡಿ, ಗೋವಿಂದಪ್ಪ ನಾಯ್ಕ, ನಾಗಪ್ಪ ಹೊಸಟ್ಟಿ, ಮನೋ ಹುಣಸಿಕಟ್ಟಿ, ಮಹೇಶ್ ಅಂಗಡಿ, ಹನುಮಂತ ವಿಷ್ಣು ತುಳಸಿಗೇರಿ, ಸುರೇಶ್ ಹಿರೇಮಠ, ಚೆನ್ನಪ್ಪ ದಾಸರ್, ಭೀಮಪ್ಪ ಶಿರಗುಂಪಿ, ಕೃಷ್ಣ ಯಾದವಾಡ, ಗೋಪಾಲ್ ತುಳಸಿಗೇರಿ, ನಿಖಿಲ್ ಕಿವಡಿ, ಮುತ್ತಪ್ಪ ಯರಡ್ಡಿ, ವಿಠ್ಠಲ ಕಂಟೋಟಿ, ಗಣಪತಿ ಹಂಪಿಹೊಳಿ, ವೆಂಕಣ್ಣ ಹೊರಡ್ಡಿ ಇತರರು ಹಾಜರಿದ್ದರು.