ಕನಿಷ್ಠ ಬೆಂಬಲ ಬೆಲೆ ಕಾನೂನು ಬದ್ಧಗೊಳಿಸಿ: ಕೆ.ಟಿ.ಗಂಗಾಧರ್‌

| Published : Apr 24 2024, 02:21 AM IST

ಕನಿಷ್ಠ ಬೆಂಬಲ ಬೆಲೆ ಕಾನೂನು ಬದ್ಧಗೊಳಿಸಿ: ಕೆ.ಟಿ.ಗಂಗಾಧರ್‌
Share this Article
  • FB
  • TW
  • Linkdin
  • Email

ಸಾರಾಂಶ

ಆಮದು-ರಫ್ತು ನೀತಿ ರೈತರಿಗೆ ಮಾರಕವಾಗದಿರಲಿ ಹಾಗೂ ವಿಶ್ವ ವ್ಯಾಪಾರ ಒಪ್ಪಂದದಿಂದ ಭಾರತವು ಕೃಷಿ ಕ್ಷೇತ್ರ ಹೊರಗಿಡಲಿ ಎಂದು ರೈತ ಸಂಘದ ಮುಖಂಡ ಗಂಗಾಧರ್‌ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿಶ್ವ ವಾಣಿಜ್ಯ ಒಪ್ಪಂದದಿಂದ ಕೃಷಿಯನ್ನು ಹೊರಗಿಡಬೇಕು. ಕನಿಷ್ಠ ಬೆಂಬಲ ಬೆಲೆ ಕಾನೂನು ಬದ್ಧಗೊಳಿಸಬೇಕು ಎಂದು ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್‌ ಒತ್ತಾಯಿಸಿದರು.

ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆಮದು ರಫ್ತು ನೀತಿ ರೈತರಿಗೆ ಮಾರಕವಾಗದಂತಿರಬೇಕು, ಕುಲಾಂತರಿ ಬೆಳೆಗಳನ್ನು ನಿಷೇಧಿಸಬೇಕು, ಕೃಷಿಗೆ ಸರಿಯಾದ ಬರ ಪರಿಹಾರ ಸಿಗುವಂತೆ ಮಾಡಬೇಕು. ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ವಿಶ್ವ ವ್ಯಾಪಾರ ಒಪ್ಪಂದದಿಂದ ಭಾರತವು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಹೊರಗಿಡಬೇಕು. ಆಹಾರಕಾಗಿ ಬೀಜಗಳ ಉತ್ಪಾದನೆ, ಬಳಕೆ ಮತ್ತು ಸಂರಕ್ಷಣೆ ಪ್ರತಿಯೊಬ್ಬ ರೈತರ ಹಕ್ಕಾಗಿದ್ದು, ದೇಶದ ಆಹಾರ ಸಾರ್ವಭೌಮತ್ವಕ್ಕೆ ದಕ್ಕೆ ತರುವ ಮುಕ್ತವ್ಯಾಪಾರ ಒಪ್ಪಂದದಿಂದ ಹೊರಗೆ ಬರಲು, ಚುನಾಯಿತ ಪ್ರತಿನಿಧಿಗಳು ಒತ್ತಾಯಿಸಬೇಕು. ಅಧಿಕಾರಕ್ಕೆ ಬಂದ ಅವರ ಪಕ್ಷವು ಇದಕ್ಕೆ ಬದ್ಧವಾಗಿರಬೇಕು ಎಂದು ಆಗ್ರಹಿಸಿದರು.ಕನಿಷ್ಟ ಬೆಂಬಲ ಬೆಲೆ ಕಾನೂನು ಬದ್ಧಗೊಳಿಸಬೇಕು. ಸ್ವಾಮಿನಾಥನ್ ವರದಿಯ ಅನ್ವಯ ಜಾರಿಮಾಡಬೇಕು. ರೈತರ ಎಲ್ಲ ಬೆಳೆಗಳಿಗೆ ಇದನ್ನು ಅನ್ವಯ ಮಾಡಬೇಕು. ಅದನ್ನು ಕಾನೂನಿನ ಚೌಕಟ್ಟಿನೊಳಗೆ ತರಬೇಕು. ಈ ಮೂಲಕ ದೇಶದ ರಾಜಧಾನಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ತಕ್ಷಣವೇ ಸ್ಪಂದಿಸಬೇಕು ಹಾಗೂ ಹಿಂದೆ ದೆಹಲಿಯ ಗಡಿಯಲ್ಲಿ ನಡೆದ ಸುದೀರ್ಘ ಹೋರಾಟದಲ್ಲಿ ಮಡಿದ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ವೈಜ್ಞಾನಿಕ ರೀತಿಯಲ್ಲಿ ಬೆಲೆ ನಿಗದಿಪಡಿಸಿದ ಕೂಡಲೇ ವರ್ಷ ಪೂರ್ತಿ ಖರೀದಿ ಕೇಂದ್ರಗಳ ಮೂಲಕ ಬೆಳೆಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಿಕೊಂಡು ಒಕ್ಕೂಟ ಸರ್ಕಾರ ಗ್ರಾಹಕರಿಗೆ ಮಾರಾಟವಾಗುವಂತೆ ನೀತಿಗಳನ್ನು ತರಲು ಶ್ರಮವಹಿಸಬೇಕು ಎಂದು ಮನವಿ ಮಡಿದ ಅವರು, ಕುಲಾಂತರಿ ಬೆಳೆಗಳನ್ನು ನಿಷೇಧಿಸಬೇಕು. ಕುಲಾಂತರಿ ಸಾಸಿವೆ ಸೇರಿದಂತೆ ಯಾವುದೇ ಕುಲಾಂತರಿ ಬೆಳೆಗಳು ಮತ್ತು ಅದಕ್ಕೆ ಸಂಬಂಧಿಸಿದ ಕೀಟನಾಶಕಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಒಕ್ಕೂಟ ಸರ್ಕಾರ ಕುಲಾಂತರಿ ಬೆಳೆ ಪ್ರಯೋಗಕ್ಕೆ ನೀಡಿರುವ ಅನುಮತಿಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ರೈತರ ಹಿತ ಕಾಪಾಡುವುದು ಅನಿವಾರ್ಯವಾಗಿದ್ದು, ಮುಕ್ತ ವಾಣಿಜ್ಯ ನೀತಿಗಳ ಬದಲಿಗೆ ಸರ್ಕಾರದ ಅಡಿಯಲ್ಲಿ ಕೃಷಿ ಉತ್ಪನ್ನ ಮಾರಾಟಕ್ಕಾಗಿ ನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆ ಜಾರಿಯಾಗಬೇಕು. ಕೃಷಿ ಕ್ಷೇತ್ರದಲ್ಲಿ ಸುಸ್ಥಿರತೆಗೆ ಸ್ಥಳೀಯ ಉತ್ಪಾದಕರಾದ ತೆಂಗು ಕೆಳೆಗಾರರು, ಎಣ್ಣೆಬೀಜ ಉತ್ಪಾದಕರು ಮತ್ತು ಅಡಕೆ ಬೆಳೆಗಾರರೂ ಸೇರಿದಂತೆ ಎಲ್ಲಾ ರೈತರನ್ನು ವಿದೇಶಿ ಆಮದುಗಳಿಂದ ರಕ್ಷಿಸುವುದು ಅತಿಮುಖ್ಯ. ಕರ್ನಾಟಕವು ಸೇರಿದಂತೆ ದೇಶದಲ್ಲೆಡೆ ಈಗಾಗಲೇ ಘೋಷಣೆ ಯಾಗಿರುವ ಬರಪೀಡಿತ ಪ್ರದೇಶಗಳ ರೈತಾಪಿ ಜನರಿಗೆ ಎಕರೆಗೆ ಕನಿಷ್ಠ 25 ಸಾವಿರ ರು.ಗಳನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಮತ್ತು ಬರ ಪರಿಹಾರ ಕಾಮಗಾರಿಗಳನ್ನು ಕೂಡಲೆ ಜಾರಿಗೊಳಿಸಬೇಕು ಎಂದರು.

ಶೇ.50ಕ್ಕೂ ಹೆಚ್ಚು ಉದ್ಯೋಗಗಳನ್ನು ಒಳಗೊಂಡಿರುವ ಕೃಷಿ ಕ್ಷೇತ್ರವನ್ನು ಮತ್ತು ಸಾಮಾಜಿಕ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ವಿಶ್ಲೇಷಣೆ ನಡೆಸಿ ಭೂಬಳಕೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಳಕೆ ನೀತಿಯನ್ನು ಜಾರಿಮಾಡಬೇಕು. ಈ ಮೂಲಕ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ವರ್ಗಾವಣೆ ಮಾಡುವುದಕ್ಕೆ ಕಡಿವಾಣ ಹಾಕಿ, ಕೈಗಾರಿಕೆ ಮತ್ತಿತರ ಉದ್ದೇಶಗಳಿಗಾಗಿ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಶೋಷಣೆಯನ್ನು ತಪ್ಪಿಸಬೇಕು ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಂಜಪ್ಪ, ಯಶವಂತರಾವ್ ಘೋರ್ಪಡೆ, ಜಗದೀಶ ನಾಯ್ಕ್ ಮತ್ತಿತರರು ಇದ್ದರು.