ವಿಧಾನ ಪರಿಷತ್ ಉಪಚುನಾವಣೆ: ಉಡುಪಿ ಜಿಲ್ಲೆಯಲ್ಲಿ ಯಶಸ್ವಿ ಶೇ.96.75 ಮತದಾನ

| Published : Oct 22 2024, 12:10 AM IST

ವಿಧಾನ ಪರಿಷತ್ ಉಪಚುನಾವಣೆ: ಉಡುಪಿ ಜಿಲ್ಲೆಯಲ್ಲಿ ಯಶಸ್ವಿ ಶೇ.96.75 ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಗ್ರಾಪಂ, ಪುರಸಭೆ, ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗಳ, ವಿಧಾನಸಭೆ ಮತ್ತು ಲೋಕಸಭೆಯ ಒಟ್ಟು 2480 ಮಂದಿ ಸದಸ್ಯರು ಈ ಚುನಾವಣೆಯ ಮತದಾರರಾಗಿದ್ದರು. ಅವರಲ್ಲಿ 2395 ಮಂದಿ ಅತ್ಯುತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ವಿಧಾನ ಪರಿಷತ್ ನಲ್ಲಿ ಉಡುಪಿ - ದ.ಕ. ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರ ಪ್ರತಿನಿಧಿಯ ಆಯ್ಕೆಗೆ ಸೋಮವಾರ ನಡೆದ ಉಪಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶೇ. 96.57 ರಷ್ಟು ಮತದಾನವಾಗಿದೆ.

ಜಿಲ್ಲೆಯಲ್ಲಿ ಗ್ರಾಪಂ, ಪುರಸಭೆ, ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗಳ, ವಿಧಾನಸಭೆ ಮತ್ತು ಲೋಕಸಭೆಯ ಒಟ್ಟು 2480 ಮಂದಿ ಸದಸ್ಯರು ಈ ಚುನಾವಣೆಯ ಮತದಾರರಾಗಿದ್ದರು. ಅವರಲ್ಲಿ 2395 ಮಂದಿ ಅತ್ಯುತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದರು.

ಅವರಲ್ಲಿ 1195 ಪುರುಷ ಮತದಾರರಲ್ಲಿ 1154 (ಶೇ 96.56) ಮತ್ತು 1285 ಮಹಿಳಾ ಮತದಾರರಲ್ಲಿ 1241 (ಶೇ96.57) ಮಂದಿ ವಿದಾನಪರಿಷತ್ ನಲ್ಲಿ ಪ್ರತಿನಿಧಿಗೆ ಮತ ಚಲಾಯಿಸಿದ್ದಾರೆ.

ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿ 2 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸುಮಾರು ಶೇ 40.56 ರಷ್ಟು ಮತದಾನವಾಗಿತ್ತು, 11 ಗಂಟೆಗೆ ಶೇ 89.90ರಷ್ಟು, 2 ಗಂಟೆಗೆ ಶೇ 94.31 ಮತ್ತು, 4 ಗಂಟೆಗೆ 96.57ರಷ್ಟು ಗಣನೀಯ ಪ್ರಮಾಣದಲ್ಲಿ ಮತದಾನವಾಗಿತ್ತು.

ಜಿಲ್ಲೆಯಲ್ಲಿ ಒಟ್ಟು 158 ಮತಗಟ್ಟೆಗಳಲ್ಲಿ ನಡೆದ ಮತದಾನ ಅತ್ಯಂತ ಶಾಂತ ಮತ್ತು ಸುವ್ಯವಸ್ಥಿತ ರೀತಿಯಲ್ಲಿ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ 30 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಅವುಗಳಿಗೆ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಕಾರ್ಕಳದಲ್ಲಿ ಶೇ 99.28:

ಜಿಲ್ಲೆಯ 7 ತಾಲೂಕುಗಳ ಪೈಕಿ ಕಾರ್ಕಳದಲ್ಲಿ ಅತೀ ಹೆಚ್ಚು 99.28ರಷ್ಟುಮತದಾನವಾಗಿದೆ, ಅತೀ ಕಡಿಮೆ ಬೈಂದೂರಿನಲ್ಲಿ ಶೇ 88.80ರಷ್ಟು ಮತದಾನವಾಗಿದೆ.

ಉಳಿದಂತೆ ಕುಂದಾಪುರ ಶೇ 93.59, ಬ್ರಹ್ಮಾವರ ಶೇ 98.83, ಉಡುಪಿ ಶೇ 99.18, ಕಾಪು ಶೇ 97.77 ಮತ್ತು ಹೆಬ್ರಿ ತಾಲೂಕಿನಲ್ಲಿ 99.18ರಷ್ಟು ಮತದಾನವಾಗಿದೆ.

ಗಣ್ಯ ಮತದಾರರು: ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ನಗರಸಭೆಯ ಬಿಜೆಪಿ ಸದಸ್ಯರೊಡಗೂಡಿ ನಗರಸಭೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಕಾಪು ಶಾಸಕ ಸುರೇಶ್ ಶೆಟ್ಟಿ ಕಾಪು ಪುರಸಭೆಯ ಬಿಜೆಪಿ ಸದಸ್ಯರೊಂದಿಗೆ ತೆರಳಿ ಪುರಸಭೆಯಲ್ಲಿ ಮತ ಚಲಾಯಿಸಿದರು.

................

ಬೈಂದೂರು,ಕುಂದಾಪುರ ಕಡಿಮೆ ಮತದಾನ: ಬಹಿಷ್ಕಾರ ಕಾರಣ?

ಕಸ್ತೂರಿರಂಗನ್ ವರದಿ ಜಾರಿಯನ್ನು ವಿರೋಧಿಸಿ ಕುಂದಾಪುರ ಮತ್ತು ಬೈಂದೂರು ಕ್ಷೇತ್ರದ ಕೆಲವು ಗ್ರಾಪಂಗಳು ಈ ಚುನಾವಣೆಯನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದವು. ಆದರೆ ಚುನಾವಣೆ ಬಹಿಷ್ಕರಿದಂತೆ ಜಿಲ್ಲಾಡಳಿತ ಮನವಿ ಮಾಡಿತ್ತು, ರಾಜಕೀಯ ನಾಯಕರು ತಾವೂ ಕಸ್ತೂರಿರಂಗನ್ ವರದಿಯನ್ನು ವಿರೋಧಿಸುವ ಊರವಸೆ ನೀಡಿ, ಈ ಪಂಚಾಯಿತಿ ಸದಸ್ಯರ ಮನವೊಲಿಸುವ ಪ್ರಯತ್ನ ಮಾಡಿದ್ದರು.

ಆದರೂ ಜಿಲ್ಲೆಯ ಇತರ 5 ಕ್ಷೇತ್ರಗಳಿಗೆ ಹೋಲಿಸಿದರೆ ಕುಂದಾಪುರ ಮತ್ತು ಬೈಂದೂರಿನಲ್ಲಿ ಗಣನೀಯ ಮತದಾನ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 96.57ರಷ್ಟು ಮತದಾನವಾಗಿದ್ದರೂ, ಕಸ್ತೂರಿರಂಗನ್ ವರದಿಗೆ ಹೆಚ್ಚು ಪ್ರತಿರೋಧ ವ್ಯಕ್ತವಾಗಿರುವ ಬೈಂದೂರು ಕ್ಷೇತ್ರದಲ್ಲಿ ಶೇ 88.80 ರಷ್ಟು ಮತದಾನವಾಗಿದೆ. ಕುಂದಾಪುರದಲ್ಲಿ 93.59ರಷ್ಟು ಮತದಾನವಾಗಿದೆ. ಇದಕ್ಕೆ ಕೆಲವು ಗ್ರಾಪಂ ಸದಸ್ಯರು ಮತದಾನ ಬಹಿಷ್ಕರಿಸಿದ್ದು ಕಾರಣ ಎನ್ನಲಾಗುತ್ತಿದೆ.