ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಬಂಧನ ಖಂಡಿಸಿ ಯಲ್ಲಾಪುರದಲ್ಲಿ ಬಿಜೆಪಿ ಪ್ರತಿಭಟನೆ

| Published : Dec 21 2024, 01:19 AM IST

ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಬಂಧನ ಖಂಡಿಸಿ ಯಲ್ಲಾಪುರದಲ್ಲಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಡಿ. ೨೦ರಂದು ಯಲ್ಲಾಪುರದ ಅಂಬೇಡ್ಕರ್ ವೃತ್ತದ ಬಳಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಮಾತನಾಡಿದರು.

ಯಲ್ಲಾಪುರ: ಕರ್ನಾಟಕ ರಾಜ್ಯ ಇದ್ದಕ್ಕಿದ್ದ ಹಾಗೆ ತುರ್ತು ಪರಿಸ್ಥಿತಿಯತ್ತ ಸಾಗಿದೆ. ಮಿಥ್ಯಾರೋಪ ಮಾಡಿ, ದೊಡ್ಡ ನಾಟಕವನ್ನು ರೂಪಿಸಿ ಸಿ.ಟಿ. ರವಿ ಅವರನ್ನು ಬಂಧಿಸಿದೆ. ರವಿಯವರು ಅವಾಚ್ಯ ಶಬ್ದ ಬಳಸಿದ್ದು ಸದನದಲ್ಲಿ ದಾಖಲೆಯಾಗಿಲ್ಲ. ಸಭಾಪತಿಗಳೂ ಇದನ್ನು ಸ್ಪಷ್ಟಪಡಿಸಿದ್ದಾರೆ. ಆದರೂ ಸುಳ್ಳು ಆರೋಪ ಮಾಡಿರುವುದು ಖಂಡನೀಯ. ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಆರೋಪಿಸಿದರು. ಡಿ. ೨೦ರಂದು ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಮಾತನಾಡಿದರು.ರಾಜ್ಯದ ಜನರ ದಿಕ್ಕು ತಪ್ಪಿಸಲು ಕಥೆ ಕಟ್ಟಿ ರಾಜ್ಯ ಸರ್ಕಾರ ಹೀನ ಕೆಲಸದಲ್ಲಿ ತೊಡಗಿದೆ. ಇದೇ ಪ್ರವೃತ್ತಿ ಮುಂದುವರಿದರೆ ರಾಜ್ಯಾದ್ಯಂತ ಬೀದಿಗಿಳಿದು ಬಿಜೆಪಿ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರು ನಮ್ಮ ಸಂಸದರ ಮೇಲೆ ಹಲ್ಲೆ ನಡೆಸುತ್ತಾರೆ. ನಮ್ಮ ವಿಧಾನಸೌಧದಲ್ಲಿ ಕಲಾಪ ನಡೆಯುವಾಗ ಗೂಂಡಾಗಳು ಒಳಪ್ರವೇಶಿಸುತ್ತಾರೆ. ಕಾಂಗ್ರೆಸ್ಸಿಗರಿಗೆ ಸಂವಿಧಾನ ಮತ್ತು ಕಾನೂನು ಇಲ್ಲವೇ ಇಲ್ಲ. ಕೇವಲ ಪ್ರಚಾರ ಮಾತ್ರ ಮಾಡುತ್ತಾರೆ. ಇಂದು ಕಾನೂನನ್ನು ಗಾಳಿಗೆ ತೂರಿ ನಮ್ಮ ನಾಯಕರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರು ಗೂಂಡಾಗಿರಿ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಹನೆಯ ಕಟ್ಟೆ ಒಡೆದರೆ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ ಎಂದರು. ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿ ವಿರುದ್ಧ ಷಡ್ಯಂತ್ರ ಮಾಡುತ್ತ ಕಾಂಗ್ರೆಸ್ ಸರ್ಕಾರ ಮುಂದುವರಿದಿದೆ. ಪ್ರಖರ ಹಿಂದುತ್ವವಾದಿಯನ್ನು ಹೆದರಿಸಿದರೆ ಬಿಜೆಪಿ ಕಾರ್ಯಕರ್ತರು ಕುಗ್ಗುತ್ತಾರೆ ಎಂದು ಕಾಂಗ್ರೆಸ್ ತಿಳಿದಿದೆ. ನಮ್ಮ ಕಾರ್ಯಕರ್ತರು ಹಿಂಜರಿಯುವುದಿಲ್ಲ. ಮುಖ್ಯಮಂತ್ರಿಗಳು ಸಿ.ಟಿ. ರವಿ ಅವರಲ್ಲಿ ಕ್ಷಮೆ ಕೇಳಬೇಕು. ರವಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.ಪಕ್ಷದ ಜಿಲ್ಲಾ ಉಪಾಧ್ಯಕ್ಷ ಅಶೋಕ ಚಲವಾದಿ, ಪ್ರಮುಖರಾದ ರೇಖಾ ಹೆಗಡೆ, ರಾಜೇಂದ್ರ ನಾಯ್ಕ, ಶಿವಾಜಿ ನರಸಾನಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ ಮಾತನಾಡಿದರು. ಉಪಾಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ, ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ನಟರಾಜ ಗೌಡರ್, ರಾಘವೇಂದ್ರ ಭಟ್ಟ, ಚಂದ್ರಕಲಾ ಭಟ್ಟ, ಕಲ್ಪನಾ ನಾಯ್ಕ, ಗೋಪಾಲಕೃಷ್ಣ ಗಾಂವ್ಕರ, ಶಿವಲಿಂಗಯ್ಯ ಅಲ್ಲಯ್ಯನವರಮಠ, ಸುಬ್ಬಣ್ಣ ಬೋಳ್ಮನೆ, ರವಿ ಕೈಟ್ಕರ್, ಸುಮಂಗಲಾ ದೇಸಾಯಿ, ರಾಮಣ್ಣ ಚಿಕ್ಯಾನಮನೆ ಮತ್ತಿತರರು ಉಪಸ್ಥಿತರಿದ್ದರು.ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.