ಕೇರಳ, ತೆಲಂಗಾಣ, ತಮಿಳುನಾಡು, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಆಡಳಿತ ಇರುವ ಸರ್ಕಾರಗಳಿವೆ.

ಹಾವೇರಿ: ಪಶ್ಚಿಮ ಪದವೀಧರ ಕ್ಷೇತ್ರ ಸೇರಿದಂತೆ ರಾಜ್ಯದ ನಾಲ್ಕು ಕಡೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅವನತಿಗೆ ಮುನ್ನುಡಿಯಾಗಿದೆ ಎಂದಿರುವ ಮಾಜಿ ಸಚಿವ ಬಿ.ಸಿ. ಪಾಟೀಲ, ಮತದಾರರು ಬ್ಯಾಲೇಟ್‌ನಲ್ಲಿ ಬುಲೆಟ್‌ ಹಾಕಿ ಕಾಂಗ್ರೆಸ್‌ಗೆ ಪಾಠ ಕಲಿಸಿದ್ದಾರೆಂದು ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರಿಗೆ ಹೊಸ ಉತ್ಸಾಹ ಹಾಗೂ ಆತ್ಮ ಸ್ಥೈರ್ಯ ಹೆಚ್ಚಿಸಿದೆ. ರಾಜ್ಯದ ಪದವೀಧರರು, ಶಿಕ್ಷಕರು, ಸುಶಿಕ್ಷಿತರು ಕಾಂಗ್ರೆಸ್‌ನವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಕೇರಳ, ತೆಲಂಗಾಣ, ತಮಿಳುನಾಡು, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಆಡಳಿತ ಇರುವ ಸರ್ಕಾರಗಳಿವೆ. ಅಲ್ಲಿ ಇವರು ವೋಟ್ ಚೋರಿ ನಡೆಸಿಯೇ ಅಧಿಕಾರ ಹಿಡಿದಿದ್ದಾರೆಯೇ? ಎಂದು ಪ್ರಶ್ನಿಸಿರುವ ಅವರು, ಪಶ್ಚಿಮ ಪದವೀಧರ ಚುನಾವಣೆಯಲ್ಲಿ ಸ್ವತಃ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪತ್ನಿ ಹೆಸರಲ್ಲಿ ಬೇರೆ ಮಹಿಳೆ ಮತದಾನ ಮಾಡಿ ವೋಟ್ ಚೋರಿಯಂತಹ ಕೃತ್ಯ ಎಸಗಿದ್ದಾರೆ. ಇದರಲ್ಲೇ ಕಾಂಗ್ರೆಸ್‌ನವರ ಮನಸ್ಥಿತಿ ಎಂತಹದ್ದು ಎಂಬುದು ಗೊತ್ತಾಗುತ್ತದೆ ಎಂದರು.

ಲೂಟಿ ಮಾಡುವ ಹುನ್ನಾರ:

ಬರ ಪರಿಹಾರ ಬಗ್ಗೆ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ, ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಒಬ್ಬ ರೈತರ ಖಾತೆಗೆ ಕೇವಲ ₹ 2,500 ಕೊಡುವುದಾಗಿ ಘೋಷಣೆ ಮಾಡಿದೆ. ಬರದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದೆ. ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಕೇವಲ ಇಪ್ಪತ್ನಾಲ್ಕು ಗಂಟೆಯಲ್ಲಿ ಅತಿವೃಷ್ಟಿ ಪರಿಹಾರ ನೀಡಿದ್ದೆವು. ಹಾವೇರಿ ಜಿಲ್ಲೆಯೊಂದಕ್ಕೆ ₹ 385 ಕೋಟಿ ಪರಿಹಾರ ಕೊಟ್ಟಿದ್ದೆವು. ಈ ಸರ್ಕಾರಕ್ಕೆ ಏನಾದರೂ ಕೇಳಿದರೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದೆ. ಸರ್ಕಾರ ಯಾವಾಗ ಹೋಗುತ್ತೋ ಗೊತ್ತಿಲ್ಲ, ಇರುವಷ್ಟು ದಿನ ಲೂಟಿ ಮಾಡಿಕೊಂಡು ಹೋಗುವ ತೀರ್ಮಾನ ಮಾಡಿದಂತಿದೆ ಎಂದು ವಾಗ್ದಾಳಿ ನಡೆಸಿದರು.