ಸಾರಾಂಶ
ಲಕ್ಷ್ಮೇಶ್ವರ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ ಹೇಳಿಕೆ
ಲಕ್ಷ್ಮೇಶ್ವರ: ರೈತಪರ ಹೋರಾಟಗಾರರ ಮೇಲೆ ಶಾಸಕ ಡಾ. ಚಂದ್ರು ಲಮಾಣಿ ಅವರು ಕೇಸ್ ಹಾಕಿಸುವ ಮೂಲಕ ಸಮಾಜಗಳ ನಡುವೆ ಜಗಳ ಹಚ್ಚುವ ಕಾರ್ಯ ಕೈಬಿಡಬೇಕು ಎಂದು ಲಕ್ಷ್ಮೇಶ್ವರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ ಹೇಳಿದರು.ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸಕ ಡಾ. ಚಂದ್ರು ಲಮಾಣಿ ಅವರು ರೈತಪರ ಹೋರಾಟಗಾರರಾದ ಮಹೇಶ ಹೊಗೆಸೊಪ್ಪಿನ ಹಾಗೂ ಸಂಗಡಿಗರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಕೇಸ್ ಹಾಕಿಸುವ ಹೀನ ಕೃತ್ಯಕ್ಕೆ ಇಳಿದಿರುವುದು ಖಂಡನೀಯ. ಇದರಿಂದ ಸಮಾಜ ಸಮಾಜಗಳ ನಡುವೆ ವೈರತ್ವ ಹುಟ್ಟಿಸುದಂತಾಗುತ್ತದೆ. ರೈತರು ಹೋರಾಟ ಮಾಡುವ ಸಮಯದಲ್ಲಿ ಶಾಸಕರು ರೈತ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ. ಆದ್ದರಿಂದ ಅವರು ಕ್ಷಮೆ ಕೇಳಬೇಕು ಎಂದು ಹೋರಾಟಗಾರರು ಕೇಳಿದ್ದರಲ್ಲಿ ಯಾವ ತಪ್ಪು ಇಲ್ಲ. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಶಾಸಕರು ಸೇಡಿನ ರಾಜಕಾರಣ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಪುರಸಭೆ ಸದಸ್ಯನ ವಿರುದ್ಧ ಮುಖ್ಯಾಧಿಕಾರಿ ಮೂಲಕ ಕೇಸ್ ದಾಖಲಿಸುವ ಮೂಲಕ ವೈರತ್ವ ಸಾಧಿಸುವ ಕಾರ್ಯ ಮಾಡಿದ್ದಾರೆ. ಇದನ್ನು ಇಲ್ಲಿಗೆ ನಿಲ್ಲಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಶಾಸಕರ ವಿರುದ್ದ ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ. ಮಂಜುನಾಥ ಹೊಗೆಸೊಪ್ಪಿನ ಮಾತನಾಡಿ, ನಮ್ಮ ಸಹೋದರ ಮಹೇಶ ಹೊಗೆಸೊಪ್ಪಿನ ಏನಾದರೂ ತಪ್ಪು ಮಾಡಿದ್ದರೆ ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದರೂ ಶಾಸಕರು ನಮ್ಮ ಮಾತಿಗೆ ಬೆಲೆ ಕೊಡದೆ ಸೇಡಿನ ರಾಜಕಾರಣ ಮಾಡುತ್ತಿರುವುದು ತಪ್ಪು. ನಾನು ನಮ್ಮ ಸಮಾಜದಲ್ಲಿನ ಸಾವಿರಾರು ಜನರಿಗೆ ನಿಮ್ಮ ಪರವಾಗಿ ಮತ ಹಾಕುವಂತೆ ಮನವಿ ಮಾಡಿದ್ದೇನೆ. ನಿಮ್ಮ ಸಮಾಜದಲ್ಲಿನ ಹಲವರು ನನಗೆ ಸಾಕಷ್ಟು ಬೇಕಾಗಿದ್ದಾರೆ ಅವರಿಂದ ನಿಮಗೆ ಮತ ಹಾಕುವಂತೆ ಮನವಿ ಮಾಡಿದ್ದೇವೆ. ಬಿಜೆಪಿಗಾಗಿ ದುಡಿದಿದ್ದೇವೆ. ನಮ್ಮ ಮೇಲೆ ಈ ರೀತಿಯ ದ್ವೇಷದ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಸಮಾಜಗಳ ನಡುವೆ ಜಗಳ ಹಚ್ಚುವ ಕಾರ್ಯ ನಿಲ್ಲಸಬೇಕು ಎಂದರು. ಈ ವೇಳೆ ತಾಪಂ ಮಾಜಿ ಸದಸ್ಯ ಚನ್ನಪ್ಪ ಜಗಲಿ, ದೇವಣ್ಣ ಬಳಿಗಾರ, ಸುರೇಶ ನಂದೆಣ್ಣವರ, ಅಮರಪ್ಪ ಗುಡಗುಂಟಿ, ಮಹೇಶ ಮೇಟಿ, ಚಂಬಣ್ಣ ಬಾಳಿಕಾಯಿ ಮಾತನಾಡಿದರು. ಸಭೆಯಲ್ಲಿ ಸುರೇಶ ರಾಚನಾಯ್ಕರ್ಇ, ಗಂಗಾಧರ ಮೆಣಸಿನಕಾಯಿ ಇದ್ದರು.