ಚಿರತೆಯ ದಾಳಿಗೆ ಕರು ಬಲಿ: ಗಡಚಿಂತಿ ರೈತರಲ್ಲಿ ಆತಂಕ

| Published : Nov 15 2025, 02:30 AM IST

ಸಾರಾಂಶ

ಸಾಲ ಮಾಡಿ ಎಮ್ಮೆ ತಂದು ಬೆಳೆಸಿದ್ದೆವು. ದಿನಕ್ಕೆ ಐದು–ಆರು ಲೀಟರ್ ಹಾಲು ಕೊಡುತ್ತಿದ್ದ ಎಮ್ಮೆ ಈಗ ಹಾಲು ಕೊಡುತ್ತಿಲ್ಲ

ಹನುಮಸಾಗರ: ಗ್ರಾಮದ ಸಮೀಪದ ಗಡಚಿಂತಿಗ ಗ್ರಾಮದಲ್ಲಿ ಚಿರತೆಯ ನಾಲ್ಕು ತಿಂಗಳ ಎಮ್ಮೆಯ ಕರು ಮೇಲೆ ದಾಳಿ ಮಾಡಿದ ಘಟನೆ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಲಕ್ಷ್ಮಣ ಯರಗೇರಿ ಅವರ ಜಮೀನಿನಲ್ಲಿ ಈ ಧಾರುಣ ಘಟನೆ ನಡೆದಿದೆ. ಗುರುವಾರ ತಡರಾತ್ರಿ ಲಕ್ಷಣ ಯರಗೇರಿ ಅವರು ಮೂರು ಎಮ್ಮೆ ಮತ್ತು ಒಂದು ಕರುವನ್ನು ಕಟ್ಟಿ ಮನೆಗೆ ಹೋಗಿದರು. ಬೆಳಗ್ಗೆ ಜಮೀನಿಗೆ ಬಂದಾಗ ಎಮ್ಮೆಗೆ ಸಣ್ಣ ಕರು ಚಿರತೆ ದಾಳಿಗೆ ಬಲಿಯಾಗಿರುವುದು ಕಂಡು ಬಂದಿದೆ. ಚಿರತೆ ಕರುವಿನ ಹೊಟ್ಟೆ ತಿಂದಿರುವುದು ರೈತರಿಗೆ ಆತಂಕ ತಂದಿದೆ.

ಸಾಲ ಮಾಡಿ ಎಮ್ಮೆ ತಂದು ಬೆಳೆಸಿದ್ದೆವು. ದಿನಕ್ಕೆ ಐದು–ಆರು ಲೀಟರ್ ಹಾಲು ಕೊಡುತ್ತಿದ್ದ ಎಮ್ಮೆ ಈಗ ಹಾಲು ಕೊಡುತ್ತಿಲ್ಲ. ಕರು ಸತ್ತ ಕಾರಣದಿಂದ ಬದುಕೇ ತತ್ತರಿಸಿದೆ,” ಎಂದು ಲಕ್ಷಣ ಯರಗೇರಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಈ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಚಿರತೆಯ ದಾಳಿ ಮರುಕಳಿಸುತ್ತಲೇ ಇದ್ದು, ರೈತರು ರಾತ್ರಿ ಹೊಲಗಳಿಗೆ ಹೋಗುವುದೇ ಭಯವಾಗಿದೆ. ಹಗಲಿನಲ್ಲಿ ಚಿರತೆ ಕಾಣಿಸಿಕೊಂಡರೆ ಅದು ಜನರಿಗೆ ಹೆದರಿಕೊಂಡು ಓಡಿಹೋಗುತ್ತದೆ. ಆದರೆ ರಾತ್ರಿ ಹೊತ್ತಿನಲ್ಲಿ ಮಾತ್ರ ಹಾನಿಯಾಗುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಗಡಿಭಾಗದ ಗ್ರಾಮಗಳಲ್ಲಿ ಕಳೆದ ಕೆಲ ತಿಂಗಳಿನಿಂದ ಚಿರತೆಯ ಚಟುವಟಿಕೆ ಆರಂಭವಾಗಿದೆ. ರೈತರು ಹೊಲಗದ್ದೆಗಳಿಗೆ ತೆರಳಲು ಹೆದರುತ್ತಿದ್ದಾರೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಜನರು ಒತ್ತಾಯಿಸಿದ್ದಾರೆ.

ಈ ಕುರಿತು ಹನುಮನಾಳ ಅರಣ್ಯಾಧಿಕಾರಿ ಶರಬಸಪ್ಪ ಕಂದಮಪೂರ ಮಾತನಾಡಿ, ಹನುಮನಾಳ, ನಿಲೋಗಲ್, ಗಡಚಿಂತಿ ಸೇರಿದಂತೆ ಗಡಿಭಾಗದ ಗ್ರಾಮಗಳಲ್ಲಿ ಎರಡು ಬೋನು ಅಳವಡಿಸಲಾಗಿದೆ. ಗಜೇಂದ್ರಗಡ ಭಾಗದಲ್ಲಿ ಇನ್ನೂ ಎರಡು–ಮೂರು ಬೋನು ಹಾಕಲಾಗಿದೆ. ಚಿರತೆ ಹಗಲಿನಲ್ಲಿ ಬರುವುದಿಲ್ಲ, ರಾತ್ರಿ ವೇಳೆಯಲ್ಲಿ ಮಾತ್ರ ತಿರುಗಾಡುತ್ತಿದೆ. ಆದಷ್ಟು ಬೇಗನೆ ಅದನ್ನು ಸೆರೆಹಿಡಿಯುತ್ತೇವೆ. ಹಾನಿಗೊಳಗಾದ ರೈತನನ್ನು ಭೇಟಿಯಾಗಿ ಪರಿಶೀಲಿಸಲಾಗಿದೆ. ಪರಿಹಾರಕ್ಕಾಗಿ ಮೇಲಧಿಕಾರಿಗಳಿಗೆ ಫೋಟೋ ಮತ್ತು ದಾಖಲೆಗಳನ್ನು ಕಳುಹಿಸಲಾಗಿದೆ ಎಂದರು.

ರೈತ ಮುಖಂಡ ವೆಂಕಟೇಶ ಕಬ್ಬರಗಿ, ಯಮನೂರಪ್ಪ ಗಡಚಿಂತಿ ಹಾಗೂ ರೈತರು ಮಾತನಾಡಿ, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ತ್ವರಿತವಾಗಿ ಚಿರತೆ ಸೆರೆ ಹಿಡಿಯುವಂತೆ ರೈತರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.