ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಶೆಡ್ಡಿನಲ್ಲಿದ್ದ ಕುರಿಗಳ ಮೇಲೆ ದಾಳಿ ಮಾಡಿದ್ದ ಚಿರತೆ ೧೮ ಕುರಿಗಳ ಪೈಕಿ ೧೭ ಕುರಿಗಳನ್ನು ಸಾಯಿಸಿ, ಒಂದು ಕುರಿಯನ್ನು ಹೊತೊಯ್ದಿರುವ ಘಟನೆ ತಾಲೂಕಿನ ಮುದುಗೆರೆ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.ಮುದುಗೆರೆ ಗ್ರಾಮದ ಬೋಳೇಗೌಡರ ಮಗ ಚಂದ್ರು ಎಂಬುವವರ ಕುರಿಗಳು ಚಿರತೆ ದಾಳಿಗೆ ಬಲಿಯಾಗಿದ್ದು, ರೈತ ಲಕ್ಷಾಂತರ ಮೌಲ್ಯದ ಕುರಿಗಳನ್ನು ಕಳೆದುಕೊಂಡಿದ್ದಾನೆ. ವ್ಯವಸಾಯದ ಜೊತೆಗೆ ಕುಟುಂಬ ನಿರ್ವಹಣೆಗೆಂದು ಕುರಿಗಳನ್ನು ಸಾಕಿಕೊಂಡಿದ್ದ ಚಂದ್ರು ಮಕ್ಕಳ ವಿದ್ಯಾಭ್ಯಾಸ, ಮನೆಯ ಖರ್ಚು- ವೆಚ್ಚಗಳಿಗೆ ಈ ಕುರಿಗಳನ್ನೇ ನಂಬಿಕೊಂಡಿದ್ದರು. ಈ ಭಾಗದಲ್ಲಿ ಚಿರತೆ ದಾಳಿ ಸಾಮಾನ್ಯವಾಗಿದ್ದು, ಹಲವು ಬಾರಿ ಗ್ರಾಮಕ್ಕೆ ನುಗ್ಗಿ ಕೊಟ್ಟಿಗೆಯಲ್ಲಿರುವ ಸಾಕುಪ್ರಾಣಿಗಳನ್ನು ಹೊತ್ತೊಯ್ಯುವುದು ಸಾಮಾನ್ಯವೆಂಬತಾಗಿದೆ.
ಶುಕ್ರವಾರ ರಾತ್ರಿ ಎಂದಿನಂತೆ ಕುರಿಗಳಿಗೆ ಮೇವು ಹಾಕಿ ಮಲಗಿದ್ದ ರೈತ ಮಧ್ಯರಾತ್ರಿಯಲ್ಲಿ ಕುರಿಗಳ ಗದ್ದಲ ಕೇಳಿ ಬಂದು ನೋಡುವಷ್ಟರಲ್ಲಿ ೧೮ ಕುರಿಗಳ ಪೈಕಿ ೧೭ ಹಸುನೀಗಿದ್ದು, ಒಂದು ಕುರಿಯನ್ನು ಚಿರತೆ ಎಳೆದುಕೊಂಡು ಹೋಗಿರುವುದು ಕಂಡು ಬಂದಿದೆ.ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಲಾಖೆಯಿಂದ ಸಿಗುವ ಪರಿಹಾರ ಕೊಡಿಸುವುದರ ಜೊತೆಗೆ ಬೋನ್ ಇಟ್ಟು ಚಿರತೆ ಸೆರೆ ಹಿಡಿಯುವುದಾಗಿ ತಿಳಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖಾ ಅಧಿಕಾರಿಗಳು ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮದಲ್ಲಿ ಪದೇ ಪದೇ ಚಿರತೆ ದಾಳಿ ಮಾಡುತ್ತಿದ್ದ, ಗ್ರಾಮಸ್ಥರು ಆತಂಕದಲ್ಲಿ ದಿನದೂಡುವಂತಾಗಿದೆ. ಸಮಸ್ಯೆ ಹೀಗಿದ್ದರೂ ಇತ್ತ ಗಮನಹರಿಸುತ್ತಿಲ್ಲ ಎಂದು ಕಿಡಿಕಾರಿದರು.