ಮನೆ ಪಕ್ಕದ ಕೊಟ್ಟಿಗೆಗೆ ನುಗ್ಗಿದ ಚಿರತೆ ಕುರಿಗಳ ಮೇಲೆ ದಾಳಿ ನಡೆಸಿ ಮೂರು ಕುರಿಗಳನ್ನು ಕೊಂದು ಮತ್ತೆರಡು ಕುರಿಗಳ ಕುತ್ತಿಗೆ ಸೀಳಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಕೂಚಹಳ್ಳಿಯಲ್ಲಿ ಈಚೆಗೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಎರಡು ಕುರಿಗಳೂ ಸಹ ಮೃತಪಟ್ಟಿವೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮನೆ ಪಕ್ಕದ ಕೊಟ್ಟಿಗೆಗೆ ನುಗ್ಗಿದ ಚಿರತೆ ಕುರಿಗಳ ಮೇಲೆ ದಾಳಿ ನಡೆಸಿ ಮೂರು ಕುರಿಗಳನ್ನು ಕೊಂದು ಮತ್ತೆರಡು ಕುರಿಗಳ ಕುತ್ತಿಗೆ ಸೀಳಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಕೂಚಹಳ್ಳಿಯಲ್ಲಿ ಈಚೆಗೆ ಸಂಭವಿಸಿದೆ.

ಗಂಭೀರವಾಗಿ ಗಾಯಗೊಂಡಿದ್ದ ಎರಡು ಕುರಿಗಳೂ ಸಹ ಮೃತಪಟ್ಟಿವೆ ಎನ್ನಲಾಗಿದೆ. ಗ್ರಾಮದ ಕೆ.ಟಿ.ತಮ್ಮಣ್ಣಗೌಡ ಎಂಬ ರೈತನಿಗೆ ಸೇರಿದ 50 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ 5 ಕುರಿಗಳು ಚಿರತೆ ದಾಳಿಗೆ ಬಲಿಯಾಗಿವೆ. ಒಂದು ಕೊರಿಯನ್ನು ಚಿರತೆ ಹೊತ್ತೊಯ್ದಿದೆ.

ಗ್ರಾಮದಲ್ಲಿ ಈ ಹಿಂದೆಯೂ ಸಹ ಎರಡು ಎಮ್ಮೆ, ಒಂದು ಹಸುವನ್ನು ಇದೇ ರೀತಿಯಲ್ಲಿ ಚಿರತೆ ದಾಳಿ ನಡೆಸಿ ಬಲಿ ಪಡೆದಿದ್ದು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಗ್ರಾಮದೊಳಗಿರುವ ಕೊಟ್ಟಿಗೆಗಳಿಗೆ ನುಗ್ಗಿ ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಿರುವ ಚಿರತೆಯ ದಾಳಿಯಿಂದಾಗಿ ಗ್ರಾಮಸ್ಥರು ರಾತ್ರಿ ವೇಳೆ ಗ್ರಾಮದಲ್ಲಿ ಓಡಾಡಲು ಭಯಪಡುವಂತಾಗಿದೆ.

ಕಳೆದ ಆರು ತಿಂಗಳಿಂದ ಚಿರತೆ ಹಾವಳಿಯಿಂದ ರೈತರು ಕೃಷಿ ಚಟುವಟಿಕೆಗೆ ತಮ್ಮ ಜಮೀನಿನ ಬಳಿ ಹೋಗಲು ಭಯ ಪಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಚಿರತೆಯನ್ನು ಕೂಡಲೇ ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸುದ್ದಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಗ್ರಾಮಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಚಿರತೆ ದಾಳಿಯಿಂದ ಮೃತ ಪಟ್ಟಿರುವ ಕುರಿಗಳಿಗೆ ಸರ್ಕಾರದಿಂದ ದೊರಕುವ ಪರಿಹಾರ ಕೊಡಿಸುವ ಜೊತೆಗೆ ಚಿರತೆಯನ್ನು ಸೆರೆಹಿಡಿಯಲು ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದ್ದಾರೆ.

ಚಿರತೆ ಸೇರಿದಂತೆ ಯಾವುದೇ ಕಾಡು ಪ್ರಾಣಿಗಳು ಕಾಣಿಸಿಕೊಂಡರೆ ಜನರು ಅವುಗಳನ್ನು ಗಾಬರಿಗೊಳಿಸುವ ಅಥವಾ ಹಿಡಿಯುವ ಪ್ರಯತ್ನ ಮಾಡಬಾರದು. ಆಕಸ್ಮಿಕವಾಗಿ ಚಿರತೆ ಕಾಣಿಸಿಕೊಂಡಲ್ಲಿ ವಾಟ್ಸಪ್ ಚಾಲನೆಯಲ್ಲಿರುವ ಚಿರತೆ ಕಾರ್ಯಪಡೆ ಎಲ್‌ಟಿಎಫ್ ಸಹಾಯವಾಣಿ ನಂಬರ್ 9481996026ಕ್ಕೆ ಕರೆ ಮಾಡಿ ಚಿರತೆ ಕಾಣಿಸಿಕೊಂಡ ಸ್ಥಳದ ಮಾರ್ಗಸೂಚಿಯನ್ನು ಷೇರ್ ಮಾಡಬೇಕೆಂದು ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ಸಂಪತ್ ಪಟೇಲ್ ಜನರಲ್ಲಿ ಮನವಿ ಮಾಡಿದ್ದಾರೆ.

ಚಿರತೆ ಕಾಣಿಸಿಕೊಳ್ಳುವ ಹಳ್ಳಿಗಳಲ್ಲಿ ಬೆಳಗ್ಗೆ ನಸುಕಿನ ಅಥವಾ ಕತ್ತಲು ಸಮಯದಲ್ಲಿ ಎಚ್ಚರಿಕೆಯಿಂದ ಸಂಚರಿಸಬೇಕು. ಸಂಜೆ 6 ಗಂಟೆ ನಂತರ ಜಾನುವಾರು ಸೇರಿದಂತೆ ಸಾಕು ಪ್ರಾಣಿಗಳನ್ನು ಮನೆಯೊಳಗೆ ಅಥವಾ ಕೊಟ್ಟಿಗೆಯೊಳಗೆ ಕಟ್ಟಬೇಕು. ವಾಸದ ಮನೆ, ಜನನಿಬಿಡ ಪ್ರದೇಶಗಳ ಸುತ್ತ ಮುತ್ತ ಬೆಳೆದಿರುವ ಗಿಡಗೆಂಟೆಗಳು, ಪೊದೆಗಳನ್ನು ತೆರವುಗೊಳಿಸಬೇಕು. ರಾತ್ರಿ ವೇಳೆ ರೈತರು ತಮ್ಮ ಜಮೀನುಗಳಲ್ಲಿ ಸಂಚರಿಸುವಾಗ ಕೈಯಲ್ಲಿ ಕುಡುಗೋಲು ಅಥವಾ ದೊಣ್ಣೆ ಹಿಡಿದು ಸಂಚರಿಸಬೇಕು. ಚಿರತೆ ಕಾಣಿಸಿಕೊಂಡಿರುವ ಹಳ್ಳಿಗಳಲ್ಲಿ ಮಕ್ಕಳು ಒಬ್ಬಂಟಿಯಾಗಿ ಓಡಾಡಲು ಬಿಡಬಾರದು ಮತ್ತು ಬಯಲು ಬಹಿರ್ದೆಸೆಗೆ ಹೋಗಬಾರದೆಂದು ಸಲಹೆ ನೀಡಿದ್ದಾರೆ.