ಸಾರಾಂಶ
ಹಲವಾರು ತಿಂಗಳುಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಮೂರ‍್ನಾಲ್ಕು ಚಿರತೆಗಳ ಪೈಕಿ ಒಂದು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ತಾಲೂಕಿನ ಕರೀಕೆರೆ ಮಜರೆ ಅಂಚೆಕೊಪ್ಪಲು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ತಿಪಟೂರು
ಹಲವಾರು ತಿಂಗಳುಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಮೂರ‍್ನಾಲ್ಕು ಚಿರತೆಗಳ ಪೈಕಿ ಒಂದು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ತಾಲೂಕಿನ ಕರೀಕೆರೆ ಮಜರೆ ಅಂಚೆಕೊಪ್ಪಲು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಅಂಚೆಕೊಪ್ಪಲು ಸೇರಿದಂತೆ ಆರೇಳು ಗ್ರಾಮಗಳ ಗ್ರಾಮಸ್ಥರಿಗೆ ತೊಂದರೆ ಕೊಡುತ್ತಿದ್ದ ಚಿರತೆಗಳಲ್ಲಿ ಒಂದು ಚಿರತೆ ಬೋನಿಗೆ ಬಿದ್ದಿದ್ದು ಗ್ರಾಮಸ್ಥರು ತುಸು ನಿರಾಳರಾಗಿದ್ದಾರೆ. ಹಲವು ತಿಂಗಳುಗಳಿಂದ ಬೀಡು ಬಿಟ್ಟಿದ್ದ ಚಿರತೆಗಳು ರೈತರಲ್ಲಿ ಆತಂಕ ಉಂಟು ಮಾಡಿದ್ದವು. ಚಿರತೆಗಳ ಹಾವಳಿಯಿಂದ ಕತ್ತಲಾದರೆ ಓಡಾಡುವಂತಿರಲಿಲ್ಲ ಹಸು, ಮೇಕೆ, ಸಾಕು ನಾಯಿ, ಕುರಿಗಳನ್ನು ಹೊರಗೆ ಬಿಡುವಂತಿರಲಿಲ್ಲ. ಈಗಾಗಲೆ ಜನರು ಸಾಕಷ್ಟು ಕರು, ಕುರಿಗಳನ್ನು ಕಳೆದುಕೊಂಡಿದ್ದರು. ತೋಟ, ಹೊಲಗಳಲ್ಲಿ ಬೆಳಗಿನ ಸಮಯದಲ್ಲಿಯೇ ರಾಜರೋಷವಾಗಿ ಓಡಾಡುತ್ತಿದ್ದರಿಂದ ಗ್ರಾಮಸ್ಥರು ಭಯದಲ್ಲಿಯೇ ಓಡಾಡುವಂತಾಗಿತ್ತು. ಗ್ರಾಮದ ಮಂಜುನಾಥ್ ಎಂಬುವವರಿಗೆ ಸೇರಿದ ಟಗರು, ಕುರಿ, ಬಾತುಕೋಳಿಯನ್ನು ಚಿರತೆ ತಿದ್ದಿದ್ದು ಸುಮಾರು 50ಸಾವಿರ ರು. ನಷ್ಟ ಉಂಟಾಗಿದೆ. ಒಂದಲ್ಲೊಂದು ಚಿರತೆ ದಾಳಿ ಪ್ರಕರಣಗಳು ನಡೆಯುತ್ತಿದ್ದ ಪರಿಣಾಮ ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಮನವಿ ಮೇರೆಗೆ ಅಂಚೆಕೊಪ್ಪಲು ಗ್ರಾಮದ ತೋಟದಲ್ಲಿ ಬೋನನ್ನು ಇಡಲಾಗಿತ್ತು. ಆದರೆ ಸುಮಾರು ನಾಲ್ಕೈದು ದಿನಗಳಾದರೂ ಚಿರತೆಗಳು ಬೋನ್‌ಗೆ ಬಿದ್ದಿರಲಿಲ್ಲ. ಚಿರತೆಗಳ ಚಲನವಲನಗಳನ್ನು ಗಮಿನಿಸಿದ್ದ ಗ್ರಾಮಸ್ಥರು ಬೋನ್‌ನ್ನು ಊರಿನ ಗ್ರಾಮದೊಳಗೆ ತಂದಿಟ್ಟಿದ್ದರು. ಎರಡು ಮೂರು ದಿನಗಳ ನಂತರ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಬೋನಿಗೆ ಬಿದ್ದಿದ್ದ ಚಿರತೆ ವೀಕ್ಷಿಸಲು ಸುತ್ತಮುತ್ತಲಿನ ಹಳ್ಳಿಗಳಿಂದ ನೂರಾರು ಜನರು ಆಗಮಿಸಿದ್ದರು. ಇನ್ನೂ ಎರಡು-ಮೂರು ಚಿರತೆಗಳನ್ನು ಗ್ರಾಮಸ್ಥರು ನೋಡಿರುವ ಕಾರಣ ಇನ್ನೂ ಆತಂಕ ಹೋಗಿಲ್ಲ.