ತರೀಕೆರೆಮುದುಗುಂಡಿ ಗ್ರಾಮದಲ್ಲಿ ಶೌಚಾಲಯದಲ್ಲಿ ಅಡಗಿದ್ದ ಹೆಣ್ಣು ಚಿರತೆಯನ್ನು ಶನಿವಾರ ಬೋನಿನಲ್ಲಿ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ತರೀಕೆರೆ

ಮುದುಗುಂಡಿ ಗ್ರಾಮದಲ್ಲಿ ಶೌಚಾಲಯದಲ್ಲಿ ಅಡಗಿದ್ದ ಹೆಣ್ಣು ಚಿರತೆಯನ್ನು ಶನಿವಾರ ಬೋನಿನಲ್ಲಿ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಘಟನೆಯ ವಿವರಃ ಶನಿವಾರ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ತಾಲೂಕಿನ ಮುದುಗುಂಡಿ ಗ್ರಾಮದ ಮನೆಯೊಂದರ ಬಳಿ ನಾಯಿಮರಿಗಳನ್ನು ತಿನ್ನಲು ಬಂದ ಸುಮಾರು 3-4 ವರ್ಷದ ಹೆಣ್ಣು ಚಿರತೆ ಶೌಚಾಲಯದಲ್ಲಿ ಅಡಗಿತ್ತು.

ಶೌಚಾಲಯದ ಒಳಗೆ ಪ್ರಾಣಿಯೊಂದು ಸಿಲುಕಿದ ಸದ್ದು ಗಮನಿಸಿದ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ 20 ಜನ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಸೆರೆಹಿಡಿದರು.

ಶೌಚಾಲಯದಲ್ಲಿದ್ದ ಚಿರತೆಗೆ ಮೊದಲು ಅರವಳಿಕೆ ನೀಡಿ ಕೆಲ ಸಮಯದ ನಂತರ ಬಲೆ ಹಾಕಿ ಬೋನಿನೊಳಗೆ ಹಾಕಲಾಯಿತು. ಬೋನಿನಲ್ಲಿ ಚಿರತೆಯನ್ನು ತರೀಕೆರೆ ಅರಣ್ಯ ಇಲಾಖೆ ಕಚೇರಿಗೆ ತಂದು ಚಿರತೆ ಆರೋಗ್ಯ ತಪಾಸಣೆ ನಡೆಸಿದ ನಂತರ ಮರಳಿ ಸುರಕ್ಷಿತವಾಗಿ ಕಾಡಿನೊಳಕ್ಕೆ ಬಿಟ್ಟು ಬರಲಾಗುವುದು ಎಂದು ತರೀಕೆರೆ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಉಮ್ಮರ್ ಬಾದ್ ಶಾ ತಿಳಿಸಿದ್ದಾರೆ.

ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರಕುಮಾರ್ ಮಾರ್ಗದರ್ಶನದಲ್ಲಿ ಬೋನು ಮತ್ತು ಬಲೆಯೊಂದಿಗೆ ಚಿರತೆ ಇರುವ ಮುದುಗುಂಡಿ ಗ್ರಾಮಕ್ಕೆ ಅರಣ್ಯಾಧಿಕಾರಿಗಳು ತೆರಳಿ ತರೀಕೆರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಮ್ಮರ್ ಬಾದ್ ಶಾ, ಡಿ.ಆರ್.ಎಫ್.ಒ. ಉಮೇಶ್, ಲಕ್ಕವಳ್ಳಿ ಆರ್.ಎಫ್.ಒ.ಇಂದು, ತ್ಯಾವರೆಕೊಪ್ಪ ಪಶುವೈದ್ಯಾದಿಕಾರಿ ಶ್ರವಣಸಿಂಗ್ ರಾಥೋಡ್, ಅಜ್ಜಂಪುರ ಪೋಲೀಸ್ ಇಲಾಖೆ ಅಧಿಕಾರಿಗಳು, ಹುಣಸಘಟ್ಟ ಮತ್ತು ಅಜ್ಜಂಪುರ ಅರಣ್ಯಾಧಿಕಾರಿ ಸೆರಿ ಒಟ್ಟು 20 ಜನ ಅಧಿಕಾರಿಗಳ ತಂಡ ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

20ಕೆಟಿಆರ್.ಕೆ.1ಃ ತರೀಕೆರೆ ಸಮೀಪದ ಮುದುಗುಂಡಿ ಗ್ರಾಮದಲ್ಲಿ ಬೋನಿನಲ್ಲಿ ಸೆರೆಯಾದ ಹೆಣ್ಣು ಚಿರತೆ