ಸಾರಾಂಶ
ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿಯ ಅಮ್ಮಸಂದ್ರದ ಸಮೀಪ ರೈಲಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಒಂದು ವರ್ಷದ ಹೆಣ್ಣು ಚಿರತೆ ಮಂಗಳವಾರ ಬೆಳಗ್ಗೆ ಸುಮಾರು 5 ಗಂಟೆಯ ಸಮಯದಲ್ಲಿ ಸಿಮೆಂಟ್ ಕಾರ್ಖಾನೆಯ ಹಿಂಭಾಗ ರೈಲಿಗೆ ಸಿಕ್ಕಿದೆ. ಚಿರತೆಯ ತಲೆ ಮತ್ತು ಮುಂಗಾಲು ತುಂಡಾಗಿ ಹೋಗಿದೆ. ಬೆಳಗ್ಗೆ ಎಂದಿನಂತೆ ಲೈನ್ ಮೆನ್ ಗಳು ರೈಲ್ವೆ ಹಳಿ ಪರೀಕ್ಷಿಸುವಾಗ ಚಿರತೆ ರೈಲಿಗೆ ಸಿಕ್ಕಿ ಅಸುನೀಗಿರುವುದು ಪತ್ತೆಯಾಗಿದೆ. ರೈಲ್ವೆ ಅಧಿಕಾರಿಗಳು ನೀಡಿದ ದೂರಿನ್ವಯ ಸ್ಥಳಕ್ಕೆ ತಿಪಟೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಟಿ. ಭರತ್, ಚಿಕ್ಕನಾಯಕನಹಳ್ಳಿ ವಲಯ ಅರಣ್ಯಾಧಿಕಾರಿ ಅರುಣ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ಮಂಜುನಾಥ್, ಅರಣ್ಯ ಗಸ್ತು ಅಧಿಕಾರಿ ರೂಪೇಶ್ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನ್ಯಾಯಾಲಯದ ಸೂಚನೆಯ ಮೇರೆಗೆ ಪಶು ವೈದ್ಯಾಧಿಕಾರಿ ಡಾ. ಪುಟ್ಟರಾಜು, ದಂಡಿನಶಿವರ ಪಶು ವೈದ್ಯಾಧಿಕಾರಿ ಡಾ.ಮಂಜುಶ್ರೀ ರವರು ಚಿರತೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ನಿಯಮಾನುಸಾರ ಚಿರತೆಯ ಅಂತ್ಯ ಸಂಸ್ಕಾರ ಮಾಡಲಾಯಿತು.