ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ 10 ವರ್ಷದ ಬಾಲಕನನ್ನು ಕುಟುಂಬಸ್ಥರ ಸಮ್ಮುಖದಲ್ಲಿಯೇ ಚಿರತೆ ದಾಳಿ ಮಾಡಿ ಎಳೆದೊಯ್ದು ಕೊಂದು ಹಾಕಿರುವ ಹೃದಯವಿದ್ರಾವಕ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಭಾನುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಹನೂರು

ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ 10 ವರ್ಷದ ಬಾಲಕನನ್ನು ಕುಟುಂಬಸ್ಥರ ಸಮ್ಮುಖದಲ್ಲಿಯೇ ಚಿರತೆ ದಾಳಿ ಮಾಡಿ ಎಳೆದೊಯ್ದು ಕೊಂದು ಹಾಕಿರುವ ಹೃದಯವಿದ್ರಾವಕ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಭಾನುವಾರ ನಡೆದಿದೆ.

ಹರ್ಷಿತ್‌ (10) ಮೃತ. ಬೆಂಗಳೂರಿನ ಲಗ್ಗೆರೆಯ 10ಕ್ಕೂ ಹೆಚ್ಚು ನಿವಾಸಿಗಳು ಪಾದಯಾತ್ರೆ ಮೂಲಕ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರಳುತ್ತಿದ್ದರು. ಈ ವೇಳೆ ಇಂಡಿಗನತ್ತ ಗ್ರಾಮದ ಬಳಿ ತೆರಳುವಾಗ ಕಾನನ ಮಧ್ಯದಲ್ಲಿ ಚಿರತೆ ದಾಳಿ ಮಾಡಿದೆ. ಕುಟುಂಬಸ್ಥರು ಅರಚಾಡಿದರೂ ಬಿಡದ ಚಿರತೆಯು ಬಾಲಕನನ್ನು ಕಚ್ಚಿಕೊಂಡು ಕಾಡಿನ ಮಧ್ಯಕ್ಕೆ ಕೊಂಡುಹೋಗಿ ಕೊಂದು ಹಾಕಿದೆ. ಘಟನೆಯ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬಾಲಕನ ಶವ ಪತ್ತೆ ಹಚ್ಚಿದ್ದಾರೆ. ಬಾಲಕನ ಮರಣೋತ್ತರ ಪರೀಕ್ಷೆಯನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಡಲಾಗಿದೆ. ಬಾಲಕನ ಪೋಷಕರಿಗೆ ₹20 ಲಕ್ಷ ಪರಿಹಾರವನ್ನು ಅರಣ್ಯ ಇಲಾಖೆ ಘೋಷಿಸಿದೆ.

ಘಟನೆ ಹಿನ್ನೆಲೆ:

ಬೆಂಗಳೂರಿನ ಲಗ್ಗೆಯ ನಿವಾಸಿ ಸುರೇಶ್‌ ಅವರ ಕುಟುಂಬವು ಶನಿವಾರ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಭಾನುವಾರ ಬೆಳಗ್ಗೆ ನಾಗಮಲೆಗೆ ತೆರಳುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.

₹20 ಲಕ್ಷ ಪರಿಹಾರ ಘೋಷಣೆ:

ಮೃತ ಬಾಲಕನ ಕುಟುಂಬಕ್ಕೆ ಅರಣ್ಯ ಇಲಾಖೆ ₹20 ಲಕ್ಷ ಪರಿಹಾರ ಘೋಷಿಸಿದೆ. ಜೊತೆಗೆ 4 ವರ್ಷ ಪ್ರತಿ ತಿಂಗಳು ₹4000 ಜಮೆ ಮಾಡಲಾಗುತ್ತದೆ. ಉಳಿದ ₹15 ಲಕ್ಷ ಮೊತ್ತವನ್ನು ಖಾತೆಗೇ ಜಮೆ ಮಾಡಲಾಗುತ್ತದೆ ಎಂದು ಇಲಾಖೆ ಘೋಷಿಸಿದೆ.

ಅವಧಿಗೂ ಮುನ್ನ ಪಾದಯಾತ್ರೆ:

ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆ ಶುರುವಾಗುವ ಅವಧಿ ಬೆಳಗ್ಗೆ 7. ಆದರೆ ಭಾನುವಾರ ಅರಣ್ಯ ಇಲಾಖೆಯು 6 ಗಂಟೆಗೇ ಟಿಕೆಟ್‌ ವಿತರಿಸಿ, ಪಾದಯಾತ್ರೆಗೆ ಅನುಮತಿ ಕೊಟ್ಟಿದೆ. ಬೆಳಗ್ಗೆ 3-6 ಗಂಟೆ ಕಾಡು ಪ್ರಾಣಿಗಳ ಸಂಚರಿಸುವ ವೇಳೆಯಾಗಿದೆ. ನಿಯಮ ಪ್ರಕಾರ ಪಾದಯಾತ್ರಿಗಳೊಂದಿಗೆ ಕನಿಷ್ಠ ಒಬ್ಬ ಅರಣ್ಯ ಸಿಬ್ಬಂದಿ ಹಾಜರಿ ಕಡ್ಡಾಯ. ಅಲ್ಲಲ್ಲಿ ಕುಡಿಯುವ ನೀರು, ಕಾಡು ಪ್ರಾಣಿಗಳ ಕುರಿತು ಎಚ್ಚರಿಕೆ ಫಲಕ ಪ್ರಕಟಣೆ ಕಡ್ಡಾಯವಾಗಿದೆ. ಆದರೆ ಅರಣ್ಯ ಇಲಾಖೆ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಬಾಲಕನ ಸಾವಿಗೆ ಕಾರಣವಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವರ್ಷದಲ್ಲಿ 3ನೇ ದಾಳಿ, 2ನೇ ಸಾವು:

ಈ ಘಟನೆಯು 2026ರ 3ನೇ ಪ್ರಕರಣವಾಗಿದೆ. ಜ.21ರಂದು ಮಂಡ್ಯ ಜಿಲ್ಲೆಯ ಪ್ರವೀಣ್‌ ತಾಳುಬೆಟ್ಟದ ಬಳಿ ಪಾದಯಾತ್ರೆಗೆ ಬರುವಾಗ ಚಿರತೆ ದಾಳಿ ನಡೆಸಿ ಕೊಂದು ಹಾಕಿತ್ತು. ಇದಾದ ಕೆಲವೇ ದಿನಗಳಲ್ಲಿ ಮತ್ತೋರ್ವ ಯುವಕನ ಮೇಲೆ ತೀವ್ರವಾಗಿ ದಾಳಿ ನಡೆಸಿತ್ತು. ಅದೃಷ್ಟವಶಾತ್‌ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈಗ ಬಾಲಕ ಅಸುನೀಗಿದ್ದಾನೆ.

ಕೋಟ್‌...

ಅರಣ್ಯ ಇಲಾಖೆ ಅಧಿಕಾರಿಗಳು ನಮಗೆ ಕಾಡುಪ್ರಾಣಿಗಳು, ಚಿರತೆ ಇರುವ ಬಗ್ಗೆ ಹೇಳಿದ್ದರೆ ನಾವು ನಾಗಮಲೆಗೆ ತೆರಳುತ್ತಿರಲಿಲ್ಲ. ಈಗ ಇವರು ನೀಡುವ ₹20 ಲಕ್ಷ ಪರಿಹಾರ ಯಾರಿಗೆ ಬೇಕು? ನನ್ನ ಮಗ ಬದುಕಿದ್ದರೆ ಕೋಟಿ ಸಂಪಾದಿಸುತ್ತಿದ್ದ. ನನ್ನನ್ನು ಅಮ್ಮ ಅಂತ ಕರೆಯುವವರು ಯಾರು? ನನಗೆ ಅಮ್ಮ ಎನ್ನಲು ನನ್ನ ಮಗ ಬೇಕು.

-ಪವಿತ್ರಾ, ಬಾಲಕನ ತಾಯಿ

---

ಕೋಟ್‌...

ಸರ್ಕಾರದ ಗಮನಕ್ಕೆ ತಂದು ಸಚಿವರ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ನಾಗಮಲೆಗೆ ತೆರಳುವ ಭಕ್ತರಿಗೆ ಸುರಕ್ಷತಾ ದೃಷ್ಟಿಯಿಂದ ಸಿಬ್ಬಂದಿಯನ್ನು ನೇಮಿಸಿ ದೇವಾಲಯಕ್ಕೆ ತೆರಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

-ಎಂ.ಆರ್‌.ಮಂಜುನಾಥ್‌, ಹನೂರು ಶಾಸಕ.