ಸಾರಾಂಶ
ಮಂಡ್ಯ: ತಾಲೂಕಿನ ಬಿ.ಹೊಸೂರು ಗ್ರಾಮದ ಬಳಿಯ ಕಬ್ಬಿನ ಗದ್ದೆಯೊಂದರಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಹೆಣ್ಣು ಚಿರತೆಯೊಂದು ಬಿದ್ದಿದೆ. ಬಿ.ಹೊಸೂರು ಗ್ರಾಮದ ಕುಮಾರ್ ಎಂಬುವವರ ಕಬ್ಬಿನ ಗದ್ದೆಯಲ್ಲಿ ಶುಕ್ರವಾರ ಕಾರ್ಮಿಕರು ಕಬ್ಬು ಕಡಿಯುತ್ತಿದ್ದ ಸಂದರ್ಭದಲ್ಲಿ ಚಿರತೆ ಮತ್ತು ಮರಿಗಳು ಕಂಡು ಬಂದಿದ್ದವು. ಕೂಡಲೇ ಜಮೀನಿನ ಮಾಲೀಕ ಉಮೇಶ್ ಅವರು ಚಿರತೆ ಇರುವ ಬಗ್ಗೆ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರು. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೋನ್ ಇಟ್ಟಿದ್ದರು. ಸೋಮವಾರ ಬೆಳಗ್ಗೆ 8 ಗಂಟೆ ಸಮಯದಲ್ಲಿ ಅರಣ್ಯ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗಸ್ತು ಅರಣ್ಯ ಪಾಲಕರಾದ ಲೋಕೇಶ್ ಮಾತನಾಡಿ, ಜಮೀನಿನವರ ಮಾಹಿತಿ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾದೇವಸ್ವಾಮಿ, ವಲಯ ಅರಣ್ಯಾಧಿಕಾರಿ ಶೈಲಜಾ ಮಾರ್ಗದರ್ಶನದಲ್ಲಿ ಬೋನನ್ನು ಇಡಲಾಗಿತ್ತು, ಮೂರು ದಿನಗಳ ಸತತ ಕಾರ್ಯಾಚರಣೆ ಬಳಿಕ ಚಿರತೆಯು ಬೋನಿಗೆ ಬಿದ್ದಿದೆ. ಅರಣ್ಯ ಅಧಿಕಾರಿಗಳ ಕಾರ್ಯಾಚರಣೆಯಿಂದ ಒಂದು ವಾರದಲ್ಲಿ ಮಾಡ್ಲಾ, ದೊಡ್ಡ ಕೊತ್ತಗೆರೆ, ಲಾಳನಕೆರೆ ಮತ್ತು ಬಿ ಹೊಸೂರು ಗ್ರಾಮಗಳಲ್ಲಿ ನಾಲ್ಕು ಚಿರತೆಗಳು ಬೋನಿಗೆ ಬಿದ್ದಿವೆ ಎಂದು ಮಾಹಿತಿ ನೀಡಿದರು. ಗಸ್ತು ಅರಣ್ಯಪಾಲಕರಾದ ರವಿ ಕುಮಾರ್, ಅರಣ್ಯ ವೀಕ್ಷಕ ಬಳ್ಳಯ್ಯ, ಅರಣ್ಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು.