ಸಾರಾಂಶ
ರಾಜಣ್ಣ ಎಂಬುವವರು ತಮ್ಮ ಕುರಿ ಮೇಕೆಗಳನ್ನು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಚಿರತೆ ಏಕಾಏಕಿ ದಾಳಿ ನಡೆಸಿ ಕುರಿಗಳನ್ನು ಬಲಿ ತೆಗೆದುಕೊಂಡಿದೆ.
ತುರುವೇಕೆರೆ: ತಾಲೂಕಿನ ದುಂಡ ಗ್ರಾಮದ ಸುತ್ತಮುತ್ತ ಚಿರತೆಯ ಹಾವಳಿ ಮಿತಿಮೀರಿದ್ದು ಹತ್ತಾರು ಕುರಿ, ಮೇಕೆಗಳು ಚಿರತೆಗೆ ಬಲಿಯಾಗಿವೆ.
ಬಾಣಸಂದ್ರ- ದಂಡಿನಶಿವರ ಮದ್ಯೆ ಇರುವ ದುಂಡ ಗ್ರಾಮದಲ್ಲಿ ಕೆಲವು ದಿನಗಳಿಂದ ಐದಾರು ಚಿರತೆಗಳು ಬೀಡುಬಿಟ್ಟಿವೆ. ದುಂಡ ಗ್ರಾಮದೇವತೆಯ ಹರಕೆಯ ಕುರಿ, ಕಾಲೋನಿ ಮೂಡ್ಲಯ್ಯ, ಲಕ್ಕಮ್ಮ, ಸ್ವಾಮಿ, ಗ್ರಾಮದ ವಿಶ್ವನಾಥ್, ರಾಜಣ್ಣ ಎಂಬುವವರು ತಮ್ಮ ಕುರಿ ಮೇಕೆಗಳನ್ನು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಚಿರತೆ ಏಕಾಏಕಿ ದಾಳಿ ನಡೆಸಿ ಕುರಿಗಳನ್ನು ಬಲಿ ತೆಗೆದುಕೊಂಡಿದೆ.ದುಂಡ ಗ್ರಾಮಕ್ಕೆ ಹೊಂದಿಕೊಂಡಂತಿರುವ ಹೊಸೂರು ಗ್ರಾಮದ ಕುಮಾರ್ ಅವರ 2 ಕುರಿಗಳು ಚಿರತೆ ಬಾಯಿಗೆ ಬಲಿಯಾಗಿವೆ. ಚಿರತೆ ಹಾವಳಿಯಿಂದ ರೈತರು ಜಮೀನುಗಳಿಗೆ ತೆರಳಲು ಭಯಪಡುವಂತಾಗಿದೆ. ಹಗಲು ವೇಳೆಯಲ್ಲಿ ಕುರಿ ಮೇಯಿಸಲು ಹೋಗಿದ್ದ ಸಂಧರ್ಭದಲ್ಲೇ ಪೊದೆಯಲ್ಲಿ ಅಡಗಿ ಕುಳಿತ ಚಿರತೆ ಕುರಿಮೇಕೆಗಳ ಮೇಲೆ ದಾಳಿ ಮಾಡುತ್ತಿದೆ. ಕೂಡಲೇ ಚಿರತೆ ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ದಂಡಿನಶಿವರ ಗ್ರಾಮ ಪಂಚಾಯಿತಿ ಸದಸ್ಯ ಡಿ.ಸಿ.ನವೀನ್ ಕುಮಾರ್ ಮಾತನಾಡಿ, ಸುಮಾರು ಒಂದು ತಿಂಗಳಿಂದ ನಮ್ಮ ಗ್ರಾಮದಲ್ಲಿ ಐದಾರು ಚಿರತೆಗಳು ಓಡಾಡುತ್ತಿವೆ. ಹಲವಾರು ಕುರಿ ಜಾನುವಾರುಗಳನ್ನು ಬಲಿ ತೆಗೆದುಕೊಂಡಿದೆ. ಗ್ರಾಮದಲ್ಲಿ ಜನರು ರಾತ್ರಿ ವೇಳೆ ಮನೆಗಳಿಂದ ಹೊರಬರಲು ಆತಂಕ ಪಡುವಂತಾಗಿದೆ. ಅರಣ್ಯಾಧಿಕಾರಿಗಳಿಗೆ ಸುಮಾರು ದಿನಗಳಿಂದ ದೂರಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕೂಡಲೇ ಅರಣ್ಯಾಧಿಕಾರಿಗಳು ಬೋನು ಒಡ್ಡಿ ಚಿರತೆ ಬಂಧಿಸಬೇಕು. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ಮುಂದೆ ರೈತರೊಂದಿಗೆ ಧರಣಿ ಕೂರುವುದಾಗಿ ಎಚ್ಚರಿಸಿದ್ದಾರೆ. ೨ ಟಿವಿಕೆ ೨ - ತುರುವೇಕೆರೆ ತಾಲೂಕು ದುಂಡ ಗ್ರಾಮದಲ್ಲಿ ಚಿರತೆ ದಾಳಿಗೆ ಬಲಿಯಾದ ಮೇಕೆ