ಕನ್ನಡಪ್ರಭ ವಾರ್ತೆ ಹನೂರು

ಬಾಲಕನ ಬಲಿ ಪಡೆದ ಚಿರತೆಗಾಗಿ ಕಳೆದ ಒಂದು ವಾರದಿಂದ ಅರಣ್ಯ ಇಲಾಖೆ ಅಧಿಕಾರಿಗಳು ನಿರಂತರವಾಗಿ ಶೋಧನೆ ನಡೆಸುತ್ತಿದ್ದಾರೆ.

ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟ ವ್ಯಾಪ್ತಿಯ ನಾಗಮಲೆಗೆ ತೆರಳುವ ವೇಳೆಯಲ್ಲಿ ಬೆಂಗಳೂರು ಮೂಲದ ಬಾಲಕ ಚಿರತೆ ದಾಳಿಗೆ ಮೃತಪಟ್ಟಿದ್ದ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ನಾಗಮಲೆ ವ್ಯಾಪ್ತಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಚಿರತೆ ಸೆರೆಗೆ ಅರಣ್ಯ ಇಲಾಖೆ ಹರಸಾಹಸ:

ಅರಣ್ಯ ಸಚಿವರ ಕಟ್ಟುನಿಟ್ಟಿನ ಆದೇಶದ ಮೇರೆಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ 70ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಅಧಿಕಾರಿಗಳ ತಂಡ ಮಲೆ ಮಾದೇಶ್ವರ ಬೆಟ್ಟದ ನಾಗಮಲೆಗೆ ತೆರಳುವ ರಸ್ತೆಯ ಇಂಡಿಗನತ್ತ, ನಾಗಮಲೆ ಸೇರಿ 4 ಕಡೆ ಪಂಜರವನ್ನು ಅಳವಡಿಸಿ, 20ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಚಿರತೆ ಓಡಾಡುವ ಸ್ಥಳಗಳಲ್ಲಿ ಅಳವಡಿಸಲಾಗಿದ್ದು, ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗ ಚಿರತೆಯ ಚಲನವಲನ ನಿಗಾವಹಿಸುವ ಮೂಲಕ ಸೆರೆ ಹಿಡಿಯಲು ಅರಣ್ಯದಂಚಿನ ಗ್ರಾಮಗಳ ಬಳಿ ಬೀಡು ಬಿಟ್ಟಿದ್ದಾರೆ.


ಭಯಭೀತರಾಗಿರುವ ಗ್ರಾಮಸ್ಥರು:

ಬಾಲಕ ಹರ್ಷಿತ್ ಮೇಲೆ ದಾಳಿ ಮಾಡಿದ ಚಿರತೆ ಅರಣ್ಯ ಪ್ರದೇಶಕ್ಕೆ ಎಳೆದೊಯ್ದು ಕೊಂದು ಹಾಕಿರುವ ಘಟನೆ ಸೇರಿದಂತೆ ನಿರಂತರವಾಗಿ ಮೇಕೆಗಳನ್ನು ಸಹ ಬಲಿ ಪಡೆಯುತ್ತಿರುವುದು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.

ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಎಲ್ ಟಿ ಎಫ್ ಸಿಬ್ಬಂದಿ ಇದ್ದರು.