Leopard sighted on Hubballi road near Mundagoda: Concern
ಕನ್ನಡಪ್ರಭ ವಾರ್ತೆ ಮುಂಡಗೋಡ
ತಾಲೂಕಿನ ಗಡಿಭಾಗ ಹುಬ್ಬಳ್ಳಿ ರಸ್ತೆ ತಾಯವ್ವನ ದೇವಸ್ಥಾನದ ಹತ್ತಿರ ಸೋಮವಾರ ಸಂಜೆ ಚಿರತೆ ಪ್ರತ್ಯಕ್ಷವಾಗಿದ್ದು, ಈ ಮಾರ್ಗದ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.ರಾಜಾರೋಷವಾಗಿ ರಸ್ತೆಯ ಅಂಚಿನಲ್ಲಿ ಕುಳಿತಿರುವ ಚಿರತೆಯನ್ನು ಕಂಡು ಜನ ಅಚ್ಚರಿಗೊಂಡಿದ್ದಾರೆ. ಚಿರತೆ ಕಾಣಿಸುತ್ತಿದ್ದಂತೆ ಇದೇ ಮಾರ್ಗವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮುಂಡಗೋಡದ ವಿಠಲ್ ಬಾಳಂಬೀಡ ಹಾಗೂ ಗುಡ್ಡಪ್ಪ ಕಾತೂರ ಚಿರತೆ ಕಣ್ಣಿಗೆ ಬೀಳುತ್ತಿದ್ದಂತೆ, ತಮ್ಮ ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ. ವಿಷಯ ಹರಡುತ್ತಿದ್ದಂತೆ ಜನರಲ್ಲಿ ಬಯದ ವಾತಾವರಣ ಸೃಷ್ಟಿಯಾಗಿದ್ದು, ಈ ಮಾರ್ಗವಾಗಿ ಸಂಚರಿಸಲು ಭಯಪಡುತ್ತಿದ್ದಾರೆ.
ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ವೇಳೆಗೆ ಚಿರತೆಗಳು ಆಹಾರವನ್ನರಸಿ ಸಂಚರಿಸುತ್ತವೆ. ಯಾರು ಆತಂಕಪಡುವ ಅವಶ್ಯಕತೆ ಇಲ್ಲ. ಒಂಟಿಯಾಗಿ ಪ್ರಯಾಣಿಸುವವರು ಎಚ್ಚರದಿಂದಿರಬೇಕು. ಹಾಗೇನಾದರೂ ಇದ್ದರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮುಂಡಗೋಡ ವಲಯ ಅರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ ತಿಳಿಸಿದ್ದಾರೆ.ನೇತ್ರಾಣಿ ಅಡ್ವೆಂಚರ್ಸ್ ಖಾತೆ ಹ್ಯಾಕ್ ಮಾಡಿ ಗ್ರಾಹಕರಿಗೆ ವಂಚನೆ
ಮುರ್ಡೇಶ್ವರದ ಪ್ರಸಿದ್ಧ ಸ್ಕೂಬಾ ಡೈವಿಂಗ್ ಸಂಸ್ಥೆ ನೇತ್ರಾಣಿ ಅಡ್ವೆಂಚರ್ಸ್‌ನ ಅಧಿಕೃತ ಗೂಗಲ್ ವ್ಯವಹಾರಿಕ ಖಾತೆಯನ್ನು ಅಪರಿಚಿತ ವ್ಯಕ್ತಿಗಳು ಹ್ಯಾಕ್ ಮಾಡಿ, ವ್ಯವಹಾರದ ವಿವರಗಳನ್ನು ತಿರುಚಿ, ನಕಲಿ ಸಂಪರ್ಕ ಸಂಖ್ಯೆಯನ್ನು ಸೇರಿಸಿ, ಗ್ರಾಹಕರನ್ನು ವಂಚಿಸಿ ಹಣ ಸಂಗ್ರಹಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.ಸಂಸ್ಥೆಯ ಮ್ಯಾನೇಜರ್ ಈ ಕುರಿತು ಸೈಬರ್ ಕ್ರೈಂ ವಿಭಾಗಕ್ಕೆ ಅಧಿಕೃತ ದೂರನ್ನು ಸಲ್ಲಿಸಿದ್ದು, ಅದರ ಆಧಾರದ ಮೇಲೆ ತನಿಖೆ ಪ್ರಾರಂಭಗೊಂಡಿದೆ.ದೂರಿನ ಪ್ರಕಾರ, ಸಂಸ್ಥೆಯ ಗೂಗಲ್ ಪ್ರೊಫೈಲ್ ಅನ್ನು ಸ್ವಾಧೀನಕ್ಕೆ ತೆಗೆದುಕೊಂಡು, ಅದರಲ್ಲಿ ತನ್ನ ವಾಟ್ಸ್ ಆ್ಯಪ್ ಸಂಖ್ಯೆ 7090059002 ಸೇರಿಸಿ, ನೇತ್ರಾಣಿ ಅಡ್ವೆಂಚರ್ಸ್ ಮೂಲಕ ಡೈವಿಂಗ್ ಬುಕ್ಕಿಂಗ್ ಮಾಡಿಕೊಳ್ಳುವ ಗ್ರಾಹಕರಿಗೆ ನೇರ ಸಂಪರ್ಕ ಸಾಧಿಸಲು ಪ್ರಯತ್ನ ನಡೆಸಲಾಗಿದೆ. ನಂತರ ಗ್ರಾಹಕರಿಂದ ನಂಬಿಕೆ ಗಳಿಸಿ ಹಣ ಪಡೆದಿದ್ದಾರೆ.ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯ ಮಾಲೀಕ ಗಣೇಶ್ ಹರಿಕಾಂತ್, ಈ ಘಟನೆಯನ್ನು ವ್ಯವಹಾರಿಕ ಮೋಸದ ಗಂಭೀರ ಉದಾಹರಣೆ ಎಂದು ವಿವರಿಸಿ, ಪ್ರವಾಸಿಗರು ಹಾಗೂ ಗ್ರಾಹಕರು ಯಾವುದೇ ರೀತಿಯ ಪಾವತಿ ಮಾಡುವ ಮೊದಲು ಅಧಿಕೃತ ಸಂಖ್ಯೆಗಳನ್ನೇ ಪರಿಶೀಲಿಸುವಂತೆ ವಿನಂತಿ ಮಾಡಿದ್ದಾರೆ.ಗ್ರಾಹಕರು ಬುಕ್ಕಿಂಗ್ ವೇಳೆ ಕೇವಲ ಅಧಿಕೃತ ವೆಬ್‌ಸೈಟ್ www.netraniadventurs.com ಮತ್ತು ಮೊಬೈಲ್ ಸಂಖ್ಯೆ 9900431111 ಮಾತ್ರ ಬಳಸುವಂತೆ ಸಂಸ್ಥೆಯವರು ವಿನಂತಿಸಿದ್ದಾರೆ. ಸಂಶಯಾಸ್ಪದ ಸಂಖ್ಯೆ ಅಥವಾ ಲಿಂಕ್ ಮೂಲಕ ಪಾವತಿ ಬೇಡಿಕೆಯಿದ್ದಲ್ಲಿ ತಕ್ಷಣ ಸೈಬರ್ ಕ್ರೈಂ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.