ಕುಕನೂರಿನ ಕಲ್ಲು ಕ್ವಾರಿಯಲ್ಲಿ ಚಿರತೆ ಪ್ರತ್ಯಕ್ಷ

| Published : Oct 31 2024, 12:57 AM IST

ಸಾರಾಂಶ

ತಾಲೂಕಿನ ಗಾವರಾಳ ಗ್ರಾಮದಲ್ಲಿರುವ ಕಲ್ಲು ಕ್ವಾರಿಯಲ್ಲಿ ಮಂಗಳವಾರ ಚಿರತೆ ಪ್ರತ್ಯಕ್ಷವಾಗಿದೆ. ಅದನ್ನು ಗ್ರಾಮಸ್ಥರು ವಿಡಿಯೋ ಮಾಡಿದ್ದು, ಆ ವಿಡಿಯೋ ಈಗ ವೈರಲ್‌ ಆಗಿದೆ.

ಸುತ್ತಲಿನ ಜಮೀನಿನಲ್ಲಿ ಕೃಷಿ ಕೆಲಸ ಮಾಡಲು ಆತಂಕ । ಅರಣ್ಯ ಇಲಾಖೆಯಿಂದ ಬೋನ್ ಅಳವಡಿಕೆ

ಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನ ಗಾವರಾಳ ಗ್ರಾಮದಲ್ಲಿರುವ ಕಲ್ಲು ಕ್ವಾರಿಯಲ್ಲಿ ಮಂಗಳವಾರ ಚಿರತೆ ಪ್ರತ್ಯಕ್ಷವಾಗಿದೆ. ಅದನ್ನು ಗ್ರಾಮಸ್ಥರು ವಿಡಿಯೋ ಮಾಡಿದ್ದು, ಆ ವಿಡಿಯೋ ಈಗ ವೈರಲ್‌ ಆಗಿದೆ.

ಕುಕನೂರು ಪಟ್ಟಣ ಹಾಗೂ ತಾಲೂಕಿನ ಗಾವರಾಳ ಗ್ರಾಮದಲ್ಲಿರುವ ಕಲ್ಲು ಕ್ವಾರಿಯ ಕಲ್ಲು, ಗರಸು ನಡುವೆ ಚಿರತೆಗಳು ವಾಸವಿವೆ. ಇದರಿಂದ ಜನರಲ್ಲಿ ಭಯದ ಆತಂಕ ಮೂಡಿದೆ.

ಕಳೆದ ನಾಲ್ಕೈದು ವರ್ಷದಿಂದ ಈ ಸ್ಥಳದಲ್ಲಿ ಚಿರತೆಗಳು ವಾಸವಿದ್ದು, ಅರಣ್ಯ ಇಲಾಖೆಯವರು ಬೋನು ಇರಿಸಿ ಚಿರತೆ ಸೆರೆಹಿಡಿದಿದ್ದರು. ಆದರೆ ಮತ್ತಷ್ಟು ಚಿರತೆ ಹಾಗೂ ಮರಿಗಳು ಉಳಿದುಕೊಂಡಿದೆ ಎನ್ನುತ್ತಾರೆ ಇಲ್ಲಿನ ಜನರು. ಭಯದ ವಾತಾವರಣ:

ಕಲ್ಲು ಕ್ವಾರಿಗಳ ಕಲ್ಲುರಾಶಿ ನಡುವೆ ಚಿರತೆಗಳು ವಾಸಿಸುತ್ತಿವೆ. ಇವು ಜನರ ಕಣ್ಣಿಗೆ ಕಾಣುವುದಿಲ್ಲ. ಆದರೆ ನಾಯಿ ಬೇಟೆಯಾಡಿದ್ದನ್ನು ಜನರು ಕಂಡಿದ್ದಾರೆ. ಚಿರತೆ ಭಯದಿಂದ ಸುತ್ತಮುತ್ತಲಿನ ಜಮೀನಿನಲ್ಲಿ ಕೆಲಸ ಮಾಡಲು ಯಾರೂ ತೆರಳುತ್ತಿಲ್ಲ.ದೊಡ್ಡ ದೊಡ್ಡ ಕಲ್ಲು ಗುಂಪಿಗಳು:

ಗ್ರಾಮದ ಕಲ್ಲು ಕ್ವಾರಿಯಲ್ಲಿ ದೊಡ್ಡ ದೊಡ್ಡ ಕಲ್ಲು ಗುಂಪಿಗಳಿದ್ದು, ಚಿರತೆಗಳಿಗೆ ವಾಸವಿರಲು ಅನುಕೂಲಕರವಾಗಿದೆ. ನೀರು ಸಹ ಲಭ್ಯವಿದೆ. ಕಲ್ಲು ಕ್ವಾರಿ ಮಾಲೀಕರು ಕಲ್ಲು ಗುಂಪಿ ತೆರವು ಮಾಡಬೇಕು ಎಂದು ಸ್ಥಳೀಯರು ಹೇಳುತ್ತಾರೆ.ಚಿರತೆ ಹಿಡಿಯಲು ಆಗ್ರಹ:

ಕುಕನೂರಿನ ಕಲ್ಲು ಕ್ವಾರಿಯಲ್ಲಿ ವಾಸವಿರುವ ಚಿರತೆಗಳನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿಯಬೇಕು ಎಂದು ಸುತ್ತಲಿನ ರೈತರು ಆಗ್ರಹಿಸಿದ್ದಾರೆ. ಚಿರತೆ ಭಯದಿಂದ ಕೃಷಿ ಕೆಲಸಕ್ಕೆ ಹಿನ್ನಡೆ ಆಗುತ್ತಿದೆ ಎಂದು ಹೇಳುತ್ತಾರೆ. ಕೃಷಿ ಕೆಲಸಕ್ಕೆ ಕನಿಷ್ಠ ನಾಲ್ಕೈದು ಜನರನ್ನು ಕರೆದುಕೊಂಡು ಹೋಗಬೇಕಿದೆ ಎಂದು ಹೇಳಿದ್ದಾರೆ.ಬೋನ್ ಅಳವಡಿಕೆ:

ಕಲ್ಲು ಕ್ವಾರಿಯಲ್ಲಿ ಚಿರತೆ ಇರುವ ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಅಳವಡಿಕೆ ಮಾಡಿದ್ದಾರೆ. ಚಿರತೆ ಹಿಡಿಯಲು ಬೋನ್ ಅಳವಡಿಕೆ ಮಾಡಲಾಗಿದೆ ಎಂದು ಪ್ರಾದೇಶಿಕ ಅರಣ್ಯ ಇಲಾಖೆ ಉಪವಲಯ ಅಧಿಕಾರಿ ಅಂದಪ್ಪ ಕುರಿ ತಿಳಿಸಿದ್ದಾರೆ.