ಸಾರಾಂಶ
ಗಜೇಂದ್ರಗಡ: ಕುಂಟೋಜಿ ಗ್ರಾಮಕ್ಕೆ ಹೋಗುವಾಗ ಬೆಣಚಮಟ್ಟಿ ಕ್ರಾಸ್ ಸಮೀಪದಲ್ಲಿ ಇರುವ ಮೋಕಾ ಎಂಬ ಮನೆಗಳ ಬಳಿ ಚಿರತೆ ಕಂಡು ಬಂದಿದೆ ಎಂದು ಜನರು ಹೇಳಿದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.ಗುರುವಾರ ರಾತ್ರಿ ಚಿರತೆ ಶಬ್ದಕ್ಕೆ ಕುರಿಗಳು, ನಾಯಿಗಳು ಹಾಗೂ ದನಕರುಗಳು ಜೋರಾಗಿ ಕಿರುಚಲು ಆರಂಭಿಸಿವೆ. ಮನೆಯಿಂದ ಹೊರಗೆ ಬಂದು ನೋಡಿದಾಗ ಚಿರತೆ ಓಡಿ ಹೋಗಿ ಗಿಡ ಏರಿದೆ. ನಂತರ ಶುಕ್ರವಾರ ಬೆಳಗ್ಗೆ ಎದ್ದು ಚಿಕ್ಕ ಮಕ್ಕಳು ಬಯಲು ಶೌಚಕ್ಕೆ ಹೋದ ಸಂದರ್ಭದಲ್ಲಿ ಪೊದೆಯಲ್ಲಿ ಚಿರತೆ ಇರುವುದನ್ನು ನೋಡಿ ಹಾಗೂ ಅದರ ಶಬ್ದಕ್ಕೆ ಭಯಗೊಂಡು ಮನೆ ಕಡೆಗೆ ಅಳುತ್ತಾ ಬಂದಿದ್ದಾರೆ. ನಂತರ ಎಲ್ಲರೂ ಸೇರಿ ಪೊದೆಯ ಕಡೆ ಹೋಗಿ ನೋಡಿದಾಗ ಚಿರತೆ ಇರುವುದು ಕಂಡು ಬಂದಿದೆ. ಇವರೆಲ್ಲರೂ ಜೋರಾಗಿ ಕೂಗಿದಾಗ ಚಿರತೆ ಮತ್ತೇ ಗಿಡವೇರಿದೆ ಹಾಗೂ ಅಲ್ಲಿಂದ ಗುಡ್ಡದ ಕಡೆಯ ಪೊದೆಯಲ್ಲಿ ಹೋಗಿದೆ.
ಇದರಿಂದ ಭಯಗೊಂಡು ನಿವಾಸಿಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಬಂದೂಕು ಸಮೇತ ಬಂದಿದ್ದ ಅರಣ್ಯ ಅಧಿಕಾರಿಗಳು ಚಿರತೆ ಓಡಾಡಿದ ಹೆಜ್ಜೆ ಗುರುತು, ಇಕ್ಕಿ ಪತ್ತೆಗೆ ಹಾಗೂ ಚಿರತೆ ಗಿಡ ಏರುವಾಗ ಅದರ ಉಗುರಿನ ಗುರುತುಗಳನ್ನು ಪರಿಶೀಲಿಸಿದ್ದಾರೆ. ಗುರುವಾರ ಸಂಜೆ ವರೆಗೂ ಅಲ್ಲಿನ ಪೊದೆ ಹಾಗೂ ಗುಡ್ಡಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಿದ್ದಾರೆ. ಆದರೆ ಚಿರತೆ ಪತ್ತೆಯಾಗಿಲ್ಲ.ಸಂಜೆ ವೇಳೆ ಎರಡೂ ಮೂರು ಕಡೆಗಳಲ್ಲಿ ಗುಂಡು ಹಾರಿಸಿ, ಎಚ್ಚರಿಕೆಯಿಂದ ಇರಲು ಜನತೆಗೆ ಜಾಗೃತಿ ಮೂಡಿಸುವುದರ ಜತೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಚಿರತೆ ಓಡಾಟದ ಕುರಿತು ನಿಖರವಾದ ಮಾಹಿತಿ ನೀಡಿದ ಬಳಿಕವೂ ಅದನ್ನು ಹಿಡಿಯಲು ಅಧಿಕಾರಿಗಳು ಮುಂದಾಗಿಲ್ಲ ಇದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ನಿವಾಸಿ, ಕುರಿಗಾಹಿ ಭೋಜಪ್ಪ ರಾಠೋಡ ತಿಳಿಸಿದರು.;Resize=(128,128))
;Resize=(128,128))
;Resize=(128,128))