ಒಡೆಯರ ಹತ್ತೂರು, ಕುಂಕುವದಲ್ಲಿ ಚಿರತೆ ಹೆಜ್ಜೆ: ಆತಂಕ

| Published : Jul 25 2024, 01:16 AM IST

ಒಡೆಯರ ಹತ್ತೂರು, ಕುಂಕುವದಲ್ಲಿ ಚಿರತೆ ಹೆಜ್ಜೆ: ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಮತಿ ತಾಲೂಕು ವ್ಯಾಪ್ತಿಗೆ ಬರುವ ಒಡೆಯರ ಹತ್ತೂರು ಹಾಗೂ ಕುಂಕುವ ಗ್ರಾಮಗಳ ಜಮೀನುಗಳಲ್ಲಿ ಚಿರತೆ ನಡೆದಾಡಿರುವ ಹೆಜ್ಜೆ ಗುರುತುಗಳು ಕಂಡುಬಂದಿವೆ. ರೈತರು ಹಾಗೂ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ನ್ಯಾಮತಿ ತಾಲೂಕು ವ್ಯಾಪ್ತಿಗೆ ಬರುವ ಒಡೆಯರ ಹತ್ತೂರು ಹಾಗೂ ಕುಂಕುವ ಗ್ರಾಮಗಳ ಜಮೀನುಗಳಲ್ಲಿ ಚಿರತೆ ನಡೆದಾಡಿರುವ ಹೆಜ್ಜೆ ಗುರುತುಗಳು ಕಂಡುಬಂದಿವೆ. ರೈತರು ಹಾಗೂ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಈ ಭಾಗದ ಗ್ರಾಮಗಳ ಹೊಲ, ಗದ್ದೆ, ತೋಟಗಳಲ್ಲಿ ಕೆಲವು ದಿನಗಳಿಂದ ಚಿರತೆ ಓಡಾಟ ನಡೆಸಿದೆ. ಒಡೆಯರ ಹತ್ತೂರು ಗ್ರಾಮದಿಂದ ಶಿವಮೊಗ್ಗಕ್ಕೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ದಿನೇಶ್ ಎಂಬ ಯುವಕ ಬುಧವಾರ ಮುಂಜಾನೆ ಬೈಕಿನಲ್ಲಿ ಗ್ರಾಮದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದರು. ಈ ಸಂದರ್ಭ ಒಡೆಯರ ಹತ್ತೂರು ತುಂಗಾ ಮೇಲ್ದಂಡೆ ಚಾನಲ್ ಸಮೀಪದ ಜಮೀನಿನಲ್ಲಿ ಚಿರತೆ ಕಂಡಿದೆ ಎಂದು ತಿಳಿಸಿದ್ದಾನೆ. ಈ ಹಿನ್ನೆಲೆ ಹೊನ್ನಾಳಿ ವಲಯ ಆರಣ್ಯಾಧಿಕಾರಿ ಗಮನಕ್ಕೆ ತರಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಗುರುಪ್ರಸಾದ್, ಗ್ರಾಮಸ್ಥರು ತಿಳಿಸಿದ್ದಾರೆ.

ಹೊನ್ನಾಳಿ ವಲಯ ಅರಣ್ಯಾಧಿಕಾರಿ ಕಿಶೋರ್ ಪತ್ರಿಕೆಯೊಂದಿಗೆ ಮಾತನಾಡಿ, ಈ ಭಾಗದಲ್ಲಿ ಚಿರತೆ ಓಡಾಟ ನಡೆಸಿರುವುದು ಜಮೀನುಗಳಲ್ಲಿ ಅದರ ಹೆಜ್ಜೆ ಗುರುತಿನಿಂದ ದೃಢಪಟ್ಟಿದೆ. ಚಿರತೆ ಪತ್ತೆಗಾಗಿ ಈ ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ. ಚಿರತೆ ಸೆರೆ ಹಿಡಿಯಲು ಒಡೆಯರ ಹತ್ತೂರು, ಕುಂಕುವ ಸೇರಿದಂತೆ 3 ಕಡೆಗಳಲ್ಲಿ ಬೋನುಗಳನ್ನು ಇಡಲಾಗಿದೆ. ಚಿರತೆ ಓಡಾಟದ ಬಗ್ಗೆ ಆರಣ್ಯ ಇಲಾಖೆ ನಿರಂತರ ಗಮನಹರಿಸಿದೆ. ಚಿರತೆ ಸೆರೆಗೆ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ರಾತ್ರಿವೇಳೆ ಯಾರೂ ಮನೆಯಿಂದ ಹೊರಗೆ ಬರಬಾರದು. ಹಗಲಿನಲ್ಲಿ ಜಮೀನುಗಳಿಗೆ ಕೆಲಸ, ಕಾರ್ಯಗಳಿಗೆ ಒಬ್ಬಂಟ್ಟಿಗರಾಗಿ ತೆರಳದೇ ಗುಂಪಿನಲ್ಲಿ ತೆರಳುವುದು ಕ್ಷೇಮ. ರೈತರು ಮತ್ತು ಗ್ರಾಮಸ್ಥರು ಈ ಬಗ್ಗೆ ಗಮನಹರಿಸಲು ಮನವಿ ಮಾಡಲಾಗಿದೆ ಎಂದು ಆರ್‌ಎಫ್‌ಒ ಕಿಶೋರ್ ತಿಳಿಸಿದ್ದು, ಚಿರತೆ ಕಾರ್ಯಾಚರಣೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತಂದಿರುವುದಾಗಿ ಹೇಳಿದರು.

- - - -24ಎಚ್.ಎಲ್.ಐ1: ಒಡೆಯರ ಹತ್ತೂರು ಭಾಗದಲ್ಲಿ ಚಿರತೆ ಸೆರೆಗಾಗಿ ಆರಣ್ಯ ಇಲಾಖೆ ಸಿಬ್ಬಂದಿ ಬೋನು ಅಳವಡಿಸಿರುವುದು.

-24ಎಚ್.ಎಲ್.ಐ1ಎ.: ಒಡೆಯರ ಹತ್ತೂರು ಗ್ರಾಮದ ಸಮೀಪದ ತುಂಗಾ ಮೇಲ್ದಂಡೆ ಚಾನೆಲ್ ಸಮೀಪ ಚಿರತೆ ಸಂಚರಿಸಿರುವ ಹೆಜ್ಜೆ ಗುರುತುಗಳು.