ಕಾರಿಗೆ ಎರಗಿದ ಚಿರತೆ: ಹಾನಿ

| Published : Apr 06 2024, 12:47 AM IST

ಸಾರಾಂಶ

ಚಿರತೆಯ ದಾಳಿಗೆ ಕಾರಿನ ಬಂಪರ್‌ಗೆ ಹಾನಿಯಾಗಿದೆ. ಪ್ರಯಾಣಿಕ ಸೂರ್ಯಕಾಂತ ಸುವರ್ಣ ಅವರಿಗೆ ಯಾವುದೇ ಅಪಾಯ ಉಂಟಾಗಿಲ್ಲ.

ಕಾರ್ಕಳ: ಕಾರೊಂದರ ಮೇಲೆ ಚಿರತೆ ಎರಗಿದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡ ಘಟನೆ ಕಾರ್ಕಳ ತಾಲೂಕಿನ ಕರಿಯಕಲ್ಲು ಸೂರಾಲ್ ರಸ್ತೆಯ ಗುಂಡುಜೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.

ಸೂರಾಲ್ ನಿವಾಸಿ ಸೂರ್ಯಕಾಂತ ಸುವರ್ಣ (38) ಎಂಬವರು ಗುರುವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಕಾರಿನಲ್ಲಿ ಮನೆ ಕಡೆಗೆ ಹೋಗುತ್ತಿದ್ದರು. ಅದೇ ಸಂದರ್ಭದಲ್ಲಿ ಸೂರಾಲ್ ತಿರುವಿನಲ್ಲಿ ಎದುರಿನಿಂದ ಮುನ್ನುಗಿ ಬಂದ ಚಿರತೆಯೊಂದು ಕಾರಿನ ಮೇಲೆ ಎರಗಿ ಬಿದ್ದು, ಅಲ್ಲಿಂದ ಓಡಿ ಹೋಗಿದೆ.

ಚಿರತೆಯ ದಾಳಿಗೆ ಕಾರಿನ ಬಂಪರ್‌ಗೆ ಹಾನಿಯಾಗಿದೆ. ಪ್ರಯಾಣಿಕ ಸೂರ್ಯಕಾಂತ ಸುವರ್ಣ ಅವರಿಗೆ ಯಾವುದೇ ಅಪಾಯ ಉಂಟಾಗಿಲ್ಲ.* ಹತ್ತಿರದಲ್ಲೇ ಇದೆ ಶಾಲೆ:

ಸೂರಾಲು-ಗುಂಡುಜೆ ರಸ್ತೆ ಬಂಟರಿಂಜ ಕಾಡಿನ ವ್ಯಾಪ್ತಿಯಲ್ಲಿದ್ದು, ಇಲ್ಲೇ ಹತ್ತಿರದಲ್ಲಿ ಗುಂಡಾಜೆ ಹಿರಿಯ ಪ್ರಾಥಮಿಕ ಶಾಲೆಯಿದೆ. ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಿರುತ್ತಾರೆ. ಶಾಲಾ ಸಮಯದಲ್ಲಿ ಚಿರತೆ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದರೆ ಪ್ರಾಣಾಪಾಯವಾಗಬಹುದು. ಆದ್ದರಿಂದ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ‌.