ಸಾರಾಂಶ
ಕುಷ್ಠ ರೋಗವು ಮುಖ್ಯವಾಗಿ ಮೈಕೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಬರುತ್ತದೆ. ವ್ಯಕ್ತಿಯ ದೇಹದ ಮೇಲೆ ತಿಳಿ ಬಿಳಿ ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ, ದಪ್ಪದಾದ ಅಥವಾ ಹೊಳೆಯುವ ಎಣ್ಣೆ ಯುಕ್ತ ಚರ್ಮ, ಗಂಟುಗಳು, ಕಣ್ಣಿನ ರೆಪ್ಪೆಗಳನ್ನು ಮುಚ್ಚಲು ಅಸಮರ್ಥತೆ ಇವುಗಳು ರೋಗದ ಲಕ್ಷಣಗಳಾಗಿವೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕುಷ್ಠ ರೋಗಿಗಳು ಶಾಪಗ್ರಸ್ತರಲ್ಲ ಹಾಗೂ ಕಳಂಕಿತರಲ್ಲ. ರೋಗಿಗಳನ್ನು ಸಮಾಜದಲ್ಲಿ ಯಾವುದೇ ತಾರತಮ್ಯ ಮಾಡದೇ ಗೌರವಯುತವಾಗಿ ಕಾಣಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಹೇಳಿದರು.ತಾಲೂಕಿನ ಆರತಿ ಉಕ್ಕಡ ಗ್ರಾಮದ ಶ್ರೀಅಹಲ್ಯಾದೇವಿ ಮಾರಮ್ಮನವರ ಶಾಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಬಲ್ಲೆನಹಳ್ಳಿ ಆಯುಷ್ಮಾನ್ ಆರೋಗ್ಯ ಮಂದಿರ ವತಿಯಿಂದ ಏರ್ಪಡಿಸಿದ್ದ ಸ್ಪರ್ಷ ಕುಷ್ಠರೋಗ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಕುಷ್ಠ ರೋಗವು ಮುಖ್ಯವಾಗಿ ಮೈಕೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಬರುತ್ತದೆ. ವ್ಯಕ್ತಿಯ ದೇಹದ ಮೇಲೆ ತಿಳಿ ಬಿಳಿ ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ, ದಪ್ಪದಾದ ಅಥವಾ ಹೊಳೆಯುವ ಎಣ್ಣೆ ಯುಕ್ತ ಚರ್ಮ, ಗಂಟುಗಳು, ಕಣ್ಣಿನ ರೆಪ್ಪೆಗಳನ್ನು ಮುಚ್ಚಲು ಅಸಮರ್ಥತೆ, ಕೈ ಕಾಲುಗಳಲ್ಲಿ ವಾಸಿಯಾಗದ ಹುಣ್ಣು, ನಡೆಯುವಾಗ ಕಾಲು ಎಳೆಯುವುದು, ಕಾಲುಗಳಲ್ಲಿ ಜುಮ್ಮೆನುಸುವಿಕೆ, ಕೈಗಳಲ್ಲಿ ವಸ್ತುಗಳನ್ನು ಹಿಡಿಯಲು ಅಥವಾ ಪಾದರಕ್ಷೆ ತೊಡುವಲ್ಲಿ ಬಲಹೀನತೆ ಇವುಗಳು ರೋಗದ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡು ಉಚಿತವಾಗಿ ಬಹು ಔಷಧಿ ಚಿಕಿತ್ಸೆ ಪಡೆದು ಕುಷ್ಠ ರೋಗವನ್ನು ತೊಲಗಿಸಿರಿ ಎಂದರು.ನಂತರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ ಮಾತನಾಡಿ, ಜ.30ರಿಂದ ಫೆ.13 ರವರೆಗೆ ಜಾಗೃತಿ ಅಭಿಯಾನ ನಡೆಯಲಿದೆ. ರೋಗದ ಬಗ್ಗೆ ಜಾಗೃತಿ, ಜನರಲ್ಲಿರುವ ತಪ್ಪು ಕಲ್ಪನೆ ಹೊಗಲಾಡಿಸುವುದು, ಕುಷ್ಠರೋಗಕ್ಕೆ ತುತ್ತಾಗದಂತೆ ನೋಡಿಕೊಳ್ಳೋಣ ಎಂಬ ಘೋಷ ವಾಕ್ಯದೊಂದಿಗೆ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದರು.
ಇದೇ ವೇಳೆ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ವೇಳೆ ಮುಖ್ಯ ಶಿಕ್ಷಕಿ ನುಸ್ರತ್ ಅಪ್ಜಾ, ಸಮುದಾಯ ಆರೋಗ್ಯ ಅಧಿಕಾರಿ ಮಹೇಶ ಶಿಕ್ಷಕರಾದ ವಿಜಯಕುಮಾರಿ, ಶಶಿರೇಖಾ, ವೀಣಾ, ರುಕ್ಮಿಣಿ, ಸೌಮ್ಯ, ನೇತ್ರಾವತಿ, ಲಕ್ಷ್ಮೀ, ಗೀತಾದೇವಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.