ಕನಕದಾಸರ ಕೀರ್ತನೆಗಳಲ್ಲಿ ಬದುಕಿನ ಪಾಠ: ಬಸವಂತಪ್ಪ

| Published : Nov 19 2024, 12:46 AM IST

ಸಾರಾಂಶ

ಕೀರ್ತನೆಗಳ ಮೂಲಕ ಸಮಸಮಾಜ ನಿರ್ಮಾಣಕ್ಕೆ ಹೋರಾಟ ಮಾಡಿದ ಮಹಾನ್ ದಾರ್ಶನಿಕ ಕನಕ ದಾಸ ಅವರು ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಕೆಲಸ ಮಾಡಿದವರು ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಲಿಂಗಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಜಿಲ್ಲಾಡಳಿತ ನೇತೃತ್ವದಲ್ಲಿ ದಾಸಶ್ರೇಷ್ಠ ಕನಕ ದಾಸ ಜಯಂತಿ । ಸಮಸಮಾಜ ಕನಸು ಕಂಡಿದ್ದರು: ಶಾಸಕ- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಕೀರ್ತನೆಗಳ ಮೂಲಕ ಸಮಸಮಾಜ ನಿರ್ಮಾಣಕ್ಕೆ ಹೋರಾಟ ಮಾಡಿದ ಮಹಾನ್ ದಾರ್ಶನಿಕ ಕನಕ ದಾಸ ಅವರು ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಕೆಲಸ ಮಾಡಿದವರು ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಲಿಂಗಪ್ಪ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ಶ್ರೀ ಕನಕ ದಾಸ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಮಾಜಿಕ ನ್ಯಾಯಕ್ಕಾಗಿ ಆ ಕಾಲದಲ್ಲಿಯೇ ಧ್ವನಿ ಎತ್ತಿದ ಕನಕದಾಸರು ಸಮಸಮಾಜದ ನಿರ್ಮಾಣದ ಕನಸು ಕಂಡಿದ್ದರು. ಕನಕದಾಸರ ಕೀರ್ತೆಗಳ ಸಾರವನ್ನು ನಾವೆಲ್ಲರೂ ಬದುಕಿನಲ್ಲೂ ಅಳವಡಿಸಿಕೊಂಡು, ಪಾಲನೆ ಮಾಡಬೇಕು. ನಮ್ಮ ನಡೆ, ನುಡಿಯಲ್ಲಿ ಒಂದಿಷ್ಟಾದರೂ ಕನಕದಾಸರು ತೋರಿದ ಹಾದಿ ಅಳವಡಿಸಿಕೊಂಡರೆ, ಇಂತಹ ಆಚರಣೆಗಳಿಗೂ ಅರ್ಥ ಬರುತ್ತದೆ ಎಂದರು.

ದಾಸಶ್ರೇಷ್ಠ ಕನಕ ದಾಸರ ಸಾಹಿತ್ಯವು ಅನುಭವದಿಂದ ಕೂಡಿರುವಂಥದು. ಕನಕರ ಕೀರ್ತನೆಗಳೆಲ್ಲಾ ಭಕ್ತಿ, ಸಮಾಜ ಚಿಂತನೆಗಳನ್ನು ಒಳಗೊಂಡಿವೆ. ದ್ವೇಷವನ್ನು ಪ್ರೀತಿಯಿಂದ ಗೆದ್ದು ಸಮಾನತೆಯ ಸಮಾಜವನ್ನು ಕಟ್ಟಲು ನೆರವಾದ ಮಾರ್ಗದರ್ಶಿಯಾಗಿದ್ದಾರೆ. ಬಸವಣ್ಣ, ಕನಕ ದಾಸರು, ಅಂಬೇಡ್ಕರ್ ಈ ಮೂವರ ಚಿಂತನೆಗಳು ಒಂದೇ ಆಗಿದ್ದರಿಂದ ಸಮಸಮಾಜ ನಿರ್ಮಾಣ ಸಾಧ್ಯವಾಯಿತು ಎಂದು ವಿವರಿಸಿದರು.

ಏಳು ಕೊಪ್ಪರಿಗೆ ಬಂಗಾರವು ಕನಕ ದಾಸರಿಗೆ ಸಿಕ್ಕರೂ ಅದನ್ನು ಸ್ವಾರ್ಥಕ್ಕಾಗಿ ಬಳಸದೇ, ಸಮಾಜದ ಉದ್ಧಾರಕ್ಕಾಗಿ ನೀಡಿದ ಶ್ರೇಯಸ್ಸು ಅವರದಾಗಿದೆ. ಮುಂದಿನ ದಿನಗಳಲ್ಲಿ ಕನಕ ಜಯಂತಿ, ಬಸವ ಜಯಂತಿ, ಅಂಬೇಡ್ಕರ್ ಜಯಂತಿ ಸೇರಿದಂತೆ ಮಹನೀಯರು, ದಾರ್ಶನಿಕರ ಜಯಂತಿಗಳಿಗೆ ಶಾಲಾ-ಕಾಲೇಜುಗಳ ಮಕ್ಕಳನ್ನು ಕರೆಸಿ, ಆಚರಿಸುವಂತಾಗಬೇಕು ಎಂದು ಸಲಹೆ ನೀಡಿದರು.

ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, ಭಕ್ತಿಯಿಂದ ಭಗವಂತನನ್ನೇ ಒಲಿಸಿಕೊಂಡ ಸಾಧಕರು ಕನಕ ದಾಸ. ಇಂತಹ ಮಹನೀಯರ ಜೀವನಾದರ್ಶವನ್ನು ಪ್ರತಿಯೊಬ್ಬರೂ ಓದಿ ತಿಳಿಯಬೇಕು. ಸಾಧಕರ ಬದುಕಿನ ಸಂದೇಶಗಳನ್ನು ಒಂದಿಷ್ಟಾದರೂ ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಅವರು ಕನಕ ದಾಸರ ಕುರಿತು ಉಪನ್ಯಾಸ ನೀಡಿದರು.

ಉಪ ಮೇಯರ್ ಸೋಗಿ ಶಾಂತಕುಮಾರ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಅಪರ ಜಿಲ್ಲಾಧಿಕಾರಿ.ಪಿ.ಎನ್. ಲೋಕೇಶ, ಜಿಪಂ ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ, ದೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ, ಕುರುಬ ಸಮಾಜದ ಮುಖಂಡರಾದ ಆನಂದಪ್ಪ, ಹಿರಿಯ ವಕೀಲ ಲೋಕಿಕೆರೆ ಸಿದ್ದಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇತರರು ಇದ್ದರು.

- - - -18ಕೆಡಿವಿಜಿ1:

ದಾವಣಗೆರೆಯಲ್ಲಿ ಸೋಮವಾರ ದಾಸಶ್ರೇಷ್ಠ ಶ್ರೀ ಕನಕ ದಾಸರ ಜಯಂತಿಯನ್ನು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು.