ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಳವಳ್ಳಿ ತಾಲೂಕಿನಲ್ಲಿ ೨೦ ವರ್ಷಗಳ ಅವಧಿಯಲ್ಲಿ ನಡೆದಿರುವ ಭೂ ವ್ಯವಹಾರಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರು ಒತ್ತಾಯಿಸಿದರು.ಬಿ.ಸೋಮಶೇಖರ್ ಶಾಸಕರಾದಾಗಿನಿಂದ ಹಿಡಿದು ಇಲ್ಲಿಯವರೆಗೆ ನಡೆದಿರುವ ಎಲ್ಲಾ ಭೂ-ವ್ಯವಹಾರ ಪ್ರಕರಣಗಳನ್ನು ಯಾವುದೇ ತನಿಖಾ ಸಂಸ್ಥೆಯಿಂದಲಾದರೂ ನಡೆಸಲಿ. ಅದಕ್ಕೆ ನಾನು ಸಂಪೂರ್ಣ ಸಹಮತವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸವಾಲು ಹಾಕಿದರು.
ಮಳವಳ್ಳಿ ತಾಲೂಕು ಬಿ.ಜಿ.ಪುರ ಹೋಬಳಿ ಚೊಟ್ಟನಹಳ್ಳಿ ಗ್ರಾಮದ ಸರ್ವೇ ನಂ.೧೦೩/ಎರಲ್ಲಿ ಒಟ್ಟು ವಿಸ್ತೀರ್ಣ ೨೪ ಎಕರೆ ಇದ್ದು ಇದು ಸರ್ಕಾರಿ ಖರಾಬು ಜಮೀನಾಗಿದೆ. ಸರ್ಕಾರಿ ಜಮೀನನ್ನು ಕಬಳಿಸುವ ದುರುದ್ದೇಶದಿಂದ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಯಾವುದೇ ದಾಖಲೆಗಳಿಲ್ಲದಿದ್ದರೂ ಅನು ಬಿನ್ ಎಂ.ಎಸ್.ಸುಂದ್ರಪ್ಪ, ಎಸ್.ಎಂ. ಸತೀಶ್‌ಬಾಬು ಬಿನ್ ಎಂ.ಕೆ.ಶಿವಣ್ಣ, ಎಂ.ಎಸ್.ಮಂಜುನಾಥ್ ಬಿನ್ ಎಂ.ಕೆ.ಶಿವಣ್ಣ, ಎಂ.ಎಸ್.ರಾಧಾಕೃಷ್ಣ ಬಿನ್ ಎಂ.ಕೆ.ಶಿವಣ್ಣ, ಪ್ರಭು ಬಿನ್ ಲೇ.ನಂಜಯ್ಯ ಎಂಬ ಒಂದೇ ಕುಟುಂಬಕ್ಕೆ ಸೇರಿದವರ ಹೆಸರಿಗೆ ತಲಾ ೪ ಎಕರೆಯಂತೆ ೨೪ ಎಕರೆ ಜಮೀನನ್ನು ಹಕ್ಕು ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಯವರು ಮಳವಳ್ಳಿ ತಾಲೂಕು ಕಚೇರಿ ಪ್ರಥಮ ದರ್ಜೆ ಗುಮಾಸ್ತ ಕೆ.ಎಂ.ಪ್ರಕಾಶ್ ಎಂಬಾತನನ್ನು ಅಮಾನತುಗೊಳಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಹಕ್ಕು ಬದಲಾವಣೆಯಾಗಲು ತಹಸೀಲ್ದಾರ್ ಕೂಡ ಭಾಗಿಯಾಗಿದ್ದು ಅವರ ವಿರುದ್ಧವೂ ತಕ್ಷಣವೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಶಾಸಕರಾಗಿ ಬಂದ ನಂತರ ಉತ್ತಮ ಆಡಳಿತ ನೀಡುವುದಾಗಿ ಕ್ಷೇತ್ರದ ಜನರಿಗೆ ಪಿ.ಎಂ.ನರೇಂದ್ರಸ್ವಾಮಿ ನೀಡಿದ್ದ ಭರವಸೆ ಸುಳ್ಳಾಗಿದೆ. ಸರ್ಕಾರಿ ಭೂಮಿಯನ್ನೇ ಕಬಳಿಸುವ ಪ್ರಕರಣಗಳು ಹೊರಬರಲಾರಂಭಿಸಿವೆ. ತಾಲೂಕಿನಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಇದರ ಬಗ್ಗೆ ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಿ ಸರ್ಕಾರಿ ಭೂಮಿ ಖಾಸಗಿ ವ್ಯಕ್ತಿಗಳ ಪಾಲಾಗದಂತೆ ತಡೆಯಬೇಕು ಎಂದು ಆಗ್ರಹಪಡಿಸಿದರು.ನಾನು ಶಾಸಕನಾಗಿದ್ದ ಅವಧಿಯಲ್ಲಿ ದರಖಾಸ್ತು ಸಮಿತಿ ಅಧ್ಯಕ್ಷನಾಗಿದ್ದಾಗ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸುವಂತೆ ಅಂದಿನ ತಹಸೀಲ್ದಾರ್‌ಗೆ ನಿರ್ದೇಶನ ನೀಡಿದ್ದೆನು. ಸರ್ಕಾರಕ್ಕೆ ಪತ್ರ ಬರೆದು ಗಮನಸೆಳೆದಿದ್ದೆ. ಅದೇ ಸಮಯಕ್ಕೆ ಚುನಾವಣೆ ಎದುರಾಗಿದ್ದರಿಂದ ಅಲ್ಲಿಗೇ ಪ್ರಕ್ರಿಯೆ ಸ್ಥಗಿತಗೊಂಡಿತ್ತು ಎಂದರು.
ಭೂ ಅಕ್ರಮ ನಡೆಯುವುದಕ್ಕೆ ಶಾಸಕರ ಸಹಕಾರವಿದೆಯೋ, ಸರ್ಕಾರಿ ಭೂಮಿ ಖಾತೆ ಮಾಡಿಕೊಂಡಿರುವ ಖಾಸಗಿ ವ್ಯಕ್ತಿಗಳು ಶಾಸಕರ ಬೆಂಬಲಿಗರೋ, ಹಿತೈಷಿಗಳೋ ಗೊತ್ತಿಲ್ಲ. ಕೂಡಲೇ ಈ ಖಾತೆಯನ್ನು ರದ್ದುಪಡಿಸುವುದರೊಂದಿಗೆ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಈ ವಿಷಯವಾಗಿ ಲೋಕಾಯುಕ್ತ ಮತ್ತು ಸರ್ಕಾರಕ್ಕೂ ದೂರು ಸಲ್ಲಿಸುವುದಾಗಿ ತಿಳಿಸಿದರು.ಮಳವಳ್ಳಿ ತಾಲೂಕಿನ ಹೊಸಹಳ್ಳಿ, ಅಳದಾಸನಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಮತ್ತು ಮಣ್ಣು ದಂಧೆಯನ್ನು ನಡೆಸಲಾಗುತ್ತಿದೆ. ಲೋಡ್‌ಗಟ್ಟಲೆ ಲಾರಿಗಳಲ್ಲಿ ಮರಳು, ಮಣ್ಣು ಸಾಗಣೆಯಾಗುತ್ತಿದ್ದರೂ ಅದನ್ನು ಯಾರೂ ತಡೆಯುತ್ತಿಲ್ಲ. ನನ್ನ ಅವಧಿಯಲ್ಲಿ ಇಂತಹ ಅಕ್ರಮಗಳಿಗೆ ಬ್ರೇಕ್ ಹಾಕಿದ್ದೆ. ನೂತನ ಶಾಸಕರು ಬಂದ ನಂತರದಲ್ಲಿ ಅಕ್ರಮಗಳು ಒಂದೊಂದಾಗಿ ತಲೆಎತ್ತಲಾರಂಭಿಸಿವೆ. ಇವುಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕು ಎಂದರು.
ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡರಾದ ಸಿದ್ದಾಚಾಠರಿ, ಪ್ರಶಾಂತ್, ಕಾಂತರಾಜು, ಆನಂದ್, ಜಯರಾಮು ಇತರರಿದ್ದರು.