ಕೇಂದ್ರ ಬಜೆಟ್‌ನಲ್ಲಿ ಬೀದರ್‌ಗೆ ಐಐಟಿ ರಾಯಚೂರಿಗೆ ಏಮ್ಸ್ ಘೋಷಣೆಯಾಗಲಿ

| Published : Jul 13 2024, 01:31 AM IST

ಕೇಂದ್ರ ಬಜೆಟ್‌ನಲ್ಲಿ ಬೀದರ್‌ಗೆ ಐಐಟಿ ರಾಯಚೂರಿಗೆ ಏಮ್ಸ್ ಘೋಷಣೆಯಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕಿತ್ತೂರು ಕರ್ನಾಟಕದ ಜನಪ್ರತಿನಿಧಿಗಳಿಂದ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ । 16ಕ್ಕೆ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಹೋರಾಟ

ಕನ್ನಡಪ್ರಭ ವಾರ್ತೆ ಬೀದರ್‌

ಕಲ್ಯಾಣ ಕರ್ನಾಟಕ ಭಾಗಕ್ಕೆ ಕಿತ್ತೂರು ಕರ್ನಾಟಕ ಭಾಗದವರಿಂದ ಅನ್ಯಾಯವಾಗುತ್ತಿದೆ. ಕೇಂದ್ರದಲ್ಲಿ ಮಂತ್ರಿಯಾಗಿರುವ ಪ್ರಹ್ಲಾದ್‌ ಜೋಶಿ ನಮ್ಮ ರಾಯಚೂರಿಗೆ ಬರಬೇಕಿದ್ದ ಐಐಟಿ ಧಾರವಾಡಕ್ಕೆ ಕಿತ್ತುಕೊಂಡರು ಇದೀಗ ಏಮ್ಸ್‌ನತ್ತ ಕಣ್ಣು ಹಾಕಿದ್ದು, ಒಂದು ವೇಳೆ ಕೇಂದ್ರದ ಬಜೆಟ್‌ನಲ್ಲಿ ರಾಯಚೂರಿಗೆ ಏಮ್ಸ್‌ ಘೋಷಣೆ ಮಾಡದಿದ್ದಲ್ಲಿ ಪ್ರತ್ಯೇಕ ರಾಜ್ಯದ ಕೂಗು ದಟ್ಟವಾದರೂ ಅಚ್ಚರಿಯಿಲ್ಲ ಎಂದು ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ. ಬಸವರಾಜ ಕಳಸದ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಜು.16ರಂದು ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಮಾಡಲಾಗುವುದು. ಒಂದು ವೇಳೆ ಬಜೆಟ್‌ನಲ್ಲಿ ನಿರ್ಲಕ್ಷ ಮಾಡಿದರೆ ನವದೆಹಲಿಯ ಜಂತರ್‌-ಮಂತರ್‌ನಲ್ಲಿ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಜನರು ಸೇರಿಕೊಂಡು ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಪ್ರತಿಯೊಂದಕ್ಕೂ ಉತ್ತರ ಕರ್ನಾಟಕ ಹಿಂದುಳಿದಿದೆ ಎಂದು ಹೇಳುವ ಮೂಲಕ ಕಿತ್ತೂರ ಕರ್ನಾಟಕದವರು ನಮ್ಮ ಕಲ್ಯಾಣ ಕರ್ನಾಟಕದವರನ್ನು ತುಳಿಯುತ್ತಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯನವರು ರಾಯಚೂರಿಗೆ ಏಮ್ಸ್‌ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಈ ಭಾಗಕ್ಕೆ ಐಐಟಿ, ಏಮ್ಸ್‌ ಹಾಗೂ ರೈಲ್ವೆ ವಿಭಾಗೀಯ ಕಚೇರಿ ಆರಂಭಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಐದು ಸಂಸದರ ನೇತೃತ್ವದಲ್ಲಿ ಶೀಘ್ರದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ, ಜು.23ರಂದು ಮಂಡನೆ ಮಾಡಲಿರುವ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ಕೇಂದ್ರ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಜು.16ರಂದು ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಮಾಡಲಾಗುವುದು. ಒಂದು ವೇಳೆ ಬಜೆಟ್‌ನಲ್ಲಿ ನಿರ್ಲಕ್ಷ ಮಾಡಿದರೆ ನವದೆಹಲಿಯ ಜಂತರ್‌-ಮಂತರ್‌ನಲ್ಲಿ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಜನರು ಸೇರಿಕೊಂಡು ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಲಕ್ಷ್ಮಣ ದಸ್ತಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲ ಜಿಲ್ಲೆಗಳು ಒಗ್ಗಟ್ಟಾಗಿ ಹೋರಾಟ ಮಾಡಲು ನಿರ್ಧರಿಸಿದ್ದೇವೆ, ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಬೀದರ್‌ಗೆ ಐಐಟಿ, ರಾಯಚೂರು ಜಿಲ್ಲೆಗೆ ಏಮ್ಸ್ ಹಾಗೂ ಕಲಬುರಗಿಗೆ ರೈಲ್ವೆ ವಿಭಾಗೀಯ ಕಚೇರಿ ಆರಂಭಿಸಬೇಕು. ಈ ಕುರಿತು ಜು.23ರಂದು ಮಂಡನೆ ಮಾಡಲಿರುವ ಕೇಂದ್ರದ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸುರೇಶ ಚನ್ನಶೆಟ್ಟಿ, ಶಿವಶಂಕರ ಟೋಕರೆ, ವಿನಯ ಚಿತ್ರಗಾರೆ, ಜಾನ್‌ವೆಸ್ಲಿ, ಚಂದ್ರಶೇಖರ ಪಾಟೀಲ್‌, ಅಶೋಕ ಮಾನೂರೆ, ಗುಂಡೇರಾವ್‌ ಪಾಟೀಲ್‌, ವಿನಯ ಮಾಳಗೆ, ರೋಹನಕುಮಾರ ಇತರರಿದ್ದರು.

ಬೀದರ್‌ಗೆ ಬೃಹತ್‌ ಕೈಗಾರಿಕಾ ಘಟಕ ಸ್ಥಾಪನೆಗೆ ಎಚ್‌ಡಿಕೆ ಭೇಟಿ

ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಡಾ.ರಜನೀಶ್ ವಾಲಿ ಮಾತನಾಡಿ, ಬೀದರ್‌ನಲ್ಲಿ ಐಐಟಿ ಬೇಡಿಕೆ ಜೊತೆಯಲ್ಲಿ ಜಿಲ್ಲೆಗೆ ಬೃಹತ್ ಕೈಗಾರಿಕೆ ಸ್ಥಾಪನೆ ಮಾಡುವಂತೆ ಒತ್ತಾಯಿಸಲಾಗುವುದು. ಸುಮಾರು 10 ಸಾವಿರ ಕುಟುಂಬಗಳಿಗೆ ನೆರವಾಗುವಂತೆ ಕೈಗಾರಿಕೆ ಸ್ಥಾಪನೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯದವರೇ ಆದ ಕೇಂದ್ರದ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಈಗಾಗಲೇ ಭೇಟಿಯಾಗಿ ಪ್ರಾಥಮಿಕ ಹಂತದಲ್ಲಿ ಕೋರಲಾಗಿದೆ. ಬರುವ ದಿನಗಳಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌, ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್‌ ನಮೋಶಿ ಸೇರಿದಂತೆ ಮತ್ತಿತರ ಹಿರಿಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ಮತ್ತೊಮ್ಮೆ ತೆರಳಿ ಕೇಂದ್ರ ಸಚಿವರಲ್ಲಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.