ಸಾರಾಂಶ
ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಪ್ರಸಾದ ರೂಪದಲ್ಲಿ ರಾಜ್ಯದ ಬಹುತೇಕ ಮಂದಿರ ನಿರ್ಮಾಣಕ್ಕೆ ಧನ ಸಹಾಯ ಮಾಡಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಸಂಯೋಜಕ ರಾಘವೇಂದ್ರ ಪಟಗಾರ ತಿಳಿಸಿದರು.
ಹಾನಗಲ್ಲ: ದೇಶ ಧರ್ಮದ ರಕ್ಷಣೆಯಲ್ಲಿ ಪ್ರತಿಯೊಬ್ಬರೂ ಪಾಲುದಾರರಾದರೆ ಸಾಮಾಜಿಕ ಸ್ವಾಸ್ಥ್ಯ ಸಾಧ್ಯವಾಗುವುದಲ್ಲದೆ, ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಸಂಯೋಜಕ ರಾಘವೇಂದ್ರ ಪಟಗಾರ ತಿಳಿಸಿದರು.
ಹಾನಗಲ್ಲ ತಾಲೂಕಿನ ಕರಗುದರಿ ವಲಯದ ರತ್ನಾಪುರ ತಾಂಡಾ ಗ್ರಾಮದಲ್ಲಿ ಸೇವಾಲಾಲ್ ಮಂದಿರ ನಿರ್ಮಾಣಕ್ಕೆ ₹೧.೫ ಲಕ್ಷ ಸಹಾಯಧನ ವಿತರಣೆಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೇಂದ್ರ ಆಯೋಜಿಸಿದ್ದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಧರ್ಮ ಕೇಂದ್ರಗಳು ನೆಮ್ಮದಿಯ ತಾಣಗಳಾಗಬೇಕು. ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಪ್ರಸಾದ ರೂಪದಲ್ಲಿ ರಾಜ್ಯದ ಬಹುತೇಕ ಮಂದಿರ ನಿರ್ಮಾಣಕ್ಕೆ ಧನ ಸಹಾಯ ಮಾಡಿದ್ದಾರೆ. ಹಾನಗಲ್ಲ ತಾಲೂಕಿನಲ್ಲಿಯೇ ೯೮ ದೇವಸ್ಥಾನಗಳಿಗೆ ಧನ ಸಹಾಯ ನೀಡಿದ್ದಾರೆ. ಕೆರೆ ನಿರ್ಮಾಣ, ವೃದ್ಧರಿಗೆ ಮಾಶಾಸನ, ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ದುರ್ಬಲರಿಗೂ ಸಹಾಯ ನೀಡುತ್ತಿದ್ದಾರೆ. ಬಡವರು ಕೃಷಿಕರು ಕಾರ್ಮಿಕರು ಕುಶಲಕರ್ಮಿಗಳ ಸಹಾಯಕ್ಕೆ ನಿಲ್ಲುವಲ್ಲಿ ಇಡೀ ರಾಜ್ಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಹಾಯ ಕೇಳಿ ಬಂದವರಿಗೆಲ್ಲ ಪ್ರಸಾದ ರೂಪದಲ್ಲಿ ಸಹಾಯ ಮಾಡುತ್ತಿದ್ದಾರೆ. ಹಾನಗಲ್ಲ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳು ಸೇವೆ ಸಲ್ಲಿಸುತ್ತಿವೆ. ಆರ್ಥಿಕ ಸಾಮಾಜಿಕ ಸಮಾನತೆ ನಮ್ಮ ಸಂಘದ ಉದ್ದೇಶದಲ್ಲೊಂದಾಗಿದೆ ಎಂದರು.ದೇವಸ್ಥಾನ ಸಮಿತಿ ಅಧ್ಯಕ್ಷ ಕನಕಪ್ಪ ಕೊಪ್ಪದ, ದೇವೇಂದ್ರಪ್ಪ ಕೊಪ್ಪದ, ಸೋಮಣ್ಣ ಕೊಪ್ಪದ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೇಲ್ವಿಚಾರಕಿ ಯಶೋಧಾ ಮುನವಳ್ಳಿ, ಸೇವಾ ಪ್ರತಿನಿಧಿ ನಂದಾ ಅಂಗಡಿ ಮೊದಲಾದವರಿದ್ದರು.