ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೆ ಭಿಕ್ಷೆ ಎತ್ತಲಿ: ಮಹದೇವಯ್ಯ

| Published : Dec 16 2024, 12:48 AM IST

ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೆ ಭಿಕ್ಷೆ ಎತ್ತಲಿ: ಮಹದೇವಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರಿ ನೌಕರರ ಸಂಘವು ಬಾಲ ಬಡುಕರ ಸಂಘಟನೆಯಾಗಿದೆ. ಸಂಘಟನೆಯು ಸರ್ಕಾರಿ ನೌಕರರ ಕಾಯುತ್ತಿಲ್ಲ. ನೌಕರರ ಹಿತಾಸಕ್ತಿಗೆ ಕೆಲಸ ಮಾಡುವ ನಾಯಕರು ಕಡಿಮೆ ಆಗಿದ್ದಾರೆ. ಮುಖ್ಯಮಂತ್ರಿ ಹತ್ತಿರವಾಗಿ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ಬದಲು ತಮ್ಮ ಸ್ವಂತ ಕೆಲಸಗಳನ್ನು ಮಾಡಿಸಿಕೊಳ್ಳಲು ದುರ್ಬಳಕೆ ಆಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸರ್ಕಾರಿ ನೌಕರರ ಸಂಘದ ಕಟ್ಟಡ ನಿರ್ಮಾಣಕ್ಕೆ ಭಿಕ್ಷೆ ಎತ್ತಲಿ. ಆದರೆ, ಸಾಹಿತ್ಯ ಸಮ್ಮೇಳನಕ್ಕೆ ಕೊಡುತ್ತಿರುವ ಹಣ ಬಳಸುವುದು ಬೇಡ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಮಹದೇವಯ್ಯ ಮಠಪತಿ ಹೇಳಿದರು.

ನಗರದ ಬಲ್ಲಾಳ್ ವೃತ್ತದ ಬುದ್ಧ ವಿಹಾರದಲ್ಲಿ ಅಖಿಲ ಕರ್ನಾಟಕ ಸರ್ಕಾರಿ ನೌಕರರ ಒಕ್ಕೂಟ ಭಾನುವಾರ ಆಯೋಜಿಸಿದ್ದ ಮೈಸೂರು ವಿಭಾಗೀಯ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರಿ ನೌಕರರ ಒಂದು ದಿನ ಸಂಬಳ ನೀಡಬೇಕು ಸಂಘ ಹೇಳಿದೆ. ಸರಿ ಕೊಡಣ. ಆದರೆ, ಇದರಲ್ಲಿ ಸಂಘದ ಕಟ್ಟಡ ನಿರ್ಮಾಣಕ್ಕೆ ಶೇ.30ರಷ್ಟು ಹಣ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ. ಕಟ್ಟಡ ನಿರ್ಮಾಣಕ್ಕೆ ಭೀಕ್ಷೆ ಎತ್ತಲಿ ನೌಕರರು ಕೊಡುತ್ತಾರೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘವು ಬಾಲ ಬಡುಕರ ಸಂಘಟನೆಯಾಗಿದೆ. ಸಂಘಟನೆಯು ಸರ್ಕಾರಿ ನೌಕರರ ಕಾಯುತ್ತಿಲ್ಲ. ನೌಕರರ ಹಿತಾಸಕ್ತಿಗೆ ಕೆಲಸ ಮಾಡುವ ನಾಯಕರು ಕಡಿಮೆ ಆಗಿದ್ದಾರೆ. ಮುಖ್ಯಮಂತ್ರಿ ಹತ್ತಿರವಾಗಿ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ಬದಲು ತಮ್ಮ ಸ್ವಂತ ಕೆಲಸಗಳನ್ನು ಮಾಡಿಸಿಕೊಳ್ಳಲು ದುರ್ಬಳಕೆ ಆಗುತ್ತಿದೆ ಎಂದರು.

ಎಡಬಿಡಂಗಿ ಜನರು ನಮ್ಮ ಒಕ್ಕೂಟದಲ್ಲಿದ್ದಾರೆ. ಸರ್ಕಾರಿ ನೌಕರರ ಸಂಘ ಮತ್ತು ಒಕ್ಕೂಟದಲ್ಲಿಯೂ ಸದಸ್ಯತ್ವ ಪಡೆದುಕೊಂಡಿದ್ದಾರೆ. ಕೆಲವು ದಿನಗಳಲ್ಲಿ ಸರ್ಕಾರಿ ನೌಕರರ ಸಂಘದ ಚುನಾವಣೆ ಬರಲಿದ್ದು, ಒಕ್ಕೂಟದಿಂದ ದೂರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ನಮ್ಮ ನೌಕರರಲ್ಲಿ ಗಟ್ಟಿತನ, ಸ್ಪಷ್ಟತೆ ಇಲ್ಲ ಎಂದು ಅವರು ಕಿಡಿಕಾರಿದರು.

ಹಳೇ ಪಿಂಚಣಿ ಬದಲಿಗೆ ಎನ್.ಪಿ.ಎಸ್ ಜಾರಿಗೆ ತಂದಿರುವುದರಿಂದ ಸರ್ಕಾರಿ ನೌಕರರ ಬದುಕಿಗೆ ತೊಂದರೆ ಆಗಿದೆ. ನೌಕರರ ಬದುಕಿನೊಂದಿಗೆ ಸರ್ಕಾರ ಚೆಲ್ಲಾಟ ಆಡುತ್ತಿದ್ದು, ಇದರ ವಿರುದ್ಧ ಹೋರಾಟದ ಅಗತ್ಯವಿದೆ ಎಂದರು.

ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಯಿಂದ ಶಿಕ್ಷಕರಿಗೆ ಹೊರೆಯಾಗಿದೆ. ಸರ್ಕಾರ ಒಂದು ಮೊಟ್ಟೆಗೆ ₹ 5 ಕೊಡುತ್ತಿದೆ. ಆದರೆ ಅದನ್ನು ವಿದ್ಯಾರ್ಥಿಗೆ ಕೊಡುವ ತನಕ ₹ 8 ಆಗುತ್ತಿದೆ. ಸರ್ಕಾರ ಮಿದುಳಿಲ್ಲದೆ ಕೆಲಸ ಮಾಡಿ ಸರ್ಕಾರಿ ನೌಕರರು ಹೈರಾಣಾಗಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರ ಅಧ್ಯಕ್ಷ ಷಡಕ್ಷರಿ ಸ್ವಾಮಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಹಣ ಮತ್ತು ಜಾತಿ ಬಲದ ಮೂಲಕ ಅಧ್ಯಕ್ಷರಾದರು. ಆದರೆ, ನಮ್ಮ ಪ್ರಶ್ನೆಗಳಿಗೆ ಸಂಘದಲ್ಲಿ ಉತ್ತರ ಸಿಗಲಿಲ್ಲ. ಆತ್ಮಗೌರವ ಬಿಟ್ಟು ಕೆಲಸ ಮಾಡಲು ಆಗುವುದಿಲ್ಲ. ಬದಲಾವಣೆ ಸೃಷ್ಟಿ ನಿಯಮ. ಆದರೆ, ಬದಲಾವಣೆ ಒಳ್ಳೆಯ ಕಡೆ ಆಗಬೇಕು ಎಂದರು.

ಹಾಸನ ಜಿಲ್ಲೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಮತ್ತು ರಾಜ್ಯಾಧ್ಯಕ್ಷ ಎರಡು ಸ್ಥಾನದಲ್ಲಿ ಒಬ್ಬನೇ ವ್ಯಕ್ತಿ ಅಧಿಕಾರದಲ್ಲಿದ್ದಾನೆ. ಇದು ಯಾವ ರೀತಿಯ ಬೈಲಾ. ಈ ರೀತಿಯ ಬೈಲದಲ್ಲಿ ನಾವು ಹೋರಾಟ ನಡೆಸಲು ಸಾಧ್ಯವೇ? ಒಕ್ಕೂಟದಲ್ಲಿ ಯಾವುದೇ ಕಾನೂನು ಇಲ್ಲ. ಹೀಗಾಗಿ ಸಂಘದಲ್ಲಿನ ಲೋಪಗಳನ್ನು ನೌಕರರಿಗೆ ತಿಳಿಸಿ ಒಕ್ಕೂಟಕ್ಕೆ ನೋಂದಣಿ ಮಾಡಿಸಬೇಕು ಎಂದರು.

ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಲೋಕನಾಗಣ್ಣ ಮಾತನಾಡಿ, ಒಕ್ಕೂಟದ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕುಮಾರ್, ರಾಜ್ಯಾಧ್ಯಕ್ಷ ಎಚ್.ಎಸ್. ಜೈಕುಮಾರ್, ಜಿಲ್ಲಾ ಸಂಚಾಲಕ ಕುಮಾರಸ್ವಾಮಿ, ರಾಜ್ಯ ಉಪಾಧ್ಯಕ್ಷ ಜಿ.ವಿ. ಶಿವಕುಮಾರ್, ರಾಜ್ಯ ಜಂಟಿ ಕಾರ್ಯದರ್ಶಿ ಸಿ. ಪುಟ್ಟಸ್ವಾಮಿ, ಜಿಲ್ಲಾಧ್ಯಕ್ಷ ಡಾ. ಮಂಗಳಮೂರ್ತಿ, ಕಾರ್ಯಾಗಾರದ ಸಹ ಸಂಚಾಲಕ ವಜ್ರಮುನಿ ಇದ್ದರು.