ಗುಡ್ಡೆಮನೆ ಅಪ್ಪಯ್ಯ ಗೌಡರ ಹುತಾತ್ಮ ದಿನಾಚರಣೆ ನಡೆಯಿತು. ಪಠ್ಯ ಪುಸ್ತಕಗಳಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡರ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ ಎಂದು ಗಣ್ಯರು ತಿಳಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಂದಿನ ಪಠ್ಯ ಪುಸ್ತಕಗಳಲ್ಲಿ ಗುಡ್ಡೇಮನೆ ಅಪ್ಪಯ್ಯ ಗೌಡರ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ಅದನ್ನು ಅನುಷ್ಠಾನ ಮಾಡುವ ಮೂಲಕ ಇಂದಿನ ಮಕ್ಕಳಲ್ಲಿ ರಾಷ್ಟ್ರಪ್ರೇಮ ಮೂಡಿಸುವ ಅಗತ್ಯ ಇದೆ ಎಂದು ಕೊಡಗು ಗೌಡ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಂಡಿರ ಬಸಪ್ಪ ಹೇಳಿದ್ದಾರೆ.

ಮೈಸೂರಿನ ಕೊಡಗು ಗೌಡ ಸಮಾಜದ ವತಿಯಿಂದ ಸಮಾಜದ ಕೊಡಗು ಗೌಡ ಸಾಂಸ್ಕೃತಿಕ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಗುಡ್ಡೆಮನೆ ಅಪ್ಪಯ್ಯ ಗೌಡರ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಅಂದಿನ ಕಾಲಘಟ್ಟದಲ್ಲಿ ರೈತಾಪಿ ಜನರ ಮೇಲೆ ಬ್ರಿಟೀಷರ ದಬ್ಬಾಳಿಕೆಯನ್ನು ವಿರೋಧಿಸಿ ನಡೆಸಿದ ಹೋರಾಟ ಇಂದಿನ ಪೀಳಿಗೆಗೆ ಪರಿಚಯಿಸುವ ಅವಶ್ಯಕತೆ ಇದೆ ಎಂದರು.

ಕೊಡಗು ಗೌಡ ಸಮಾಜ ಅಧ್ಯಕ್ಷ ಕೊಂಬಾರನ ಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತಿಹಾಸ ಬರೆಯುವವರು ಪೂರ್ವಾಗ್ರಹ ಪೀಡಿತರಾದುದರಿಂದಲೇ ಅಪ್ಪಯ್ಯ ಗೌಡ ಅಂಥವರು ಜನ ಮಾನಸದಿಂದ ದೂರ ಉಳಿಯುವಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೊಡಗು ಗೌಡ ಸಮಾಜದ ಮಾಜಿ ಅಧ್ಯಕ್ಷ ತೊಟಂಬೈಲ್ ಮನೋಹರ್ ಮಾತನಾಡಿ, ಗುಡ್ಡೆಮನೆ ಅಪ್ಪಯ್ಯ ಗೌಡರ ಬಗ್ಗೆ ಸಂಶೋಧನೆ ನಡೆಸುವ ಅಗತ್ಯವಿದೆ ಎಂದರು.

ಅಪ್ಪಯ್ಯ ಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

ಪದಾಧಿಕಾರಿಗಳಾದ ದುಪಾಜೆ ಚಂದ್ರಶೇಖರ್, ನಡುಬೆಟ್ಟಿ ಲಕ್ಷ್ಮಣ, ನಡುಮನೆ ಚಂಗಪ್ಪ, ನಿರ್ದೇಶಕರಾದ ಕೊಂಬಾರನ ಸುಬ್ಬಯ್ಯ, ಹೊಸೂರು ರಾಘವಯ್ಯಾ, ಕುಂಟುಪುನಿ ರಮೇಶ್, ಪಾಣತ್ತಲೇ ವಸಂತ, ಕುಂಟುಪುನಿ ಶೀಲಾ, ತೋಟಂ ಬೈಲು ಇಂದಿರಾ, ವಿವಿಧ ಗೌಡ ಸಂಘಟನೆಗಳ ಅಧ್ಯಕ್ಷ ಪೊನ್ನಚನ ಅಪ್ಪಯ್ಯ, ಕೊಂಬಂಡ ಹಿರನ್, ನಡುಬೆಟ್ಟಿ ಗೀತ ಲಕ್ಷ್ಮಣ್ ಮೊದಲಾದವರು ಉಪಸ್ಥಿತರಿದ್ದರು. ಗೌಡ ಸಮಾಜದ ಕಾರ್ಯದರ್ಶಿ ಪೊನ್ನೇಟಿ ನಂದ ಸ್ವಾಗತಿಸಿದರು. ನಿರ್ದೇಶಕ ಪಟ್ಟಡ ಶಿವಕುಮಾರ್ ವಂದಿಸಿದರು.