ಬಸ್ ಚಾಲಕರು, ನಿರ್ವಾಹಕರು ಪ್ರಯಾಣಿಕರ ನಂಬಿಕೆ ಗಳಿಸಲಿ

| Published : Sep 06 2024, 01:06 AM IST

ಸಾರಾಂಶ

ಪ್ರತಿಯೊಬ್ಬರಿಗೂ ಒಂದಿಲ್ಲೊಂದು ತೊಂದರೆ ತಾಪತ್ರಯಗಳು ಇದ್ದೇ ಇರುತ್ತವೆ. ಇದನ್ನು ಪ್ರತಿಯೊಬ್ಬರೂ ಅರಿಯಬೇಕು.

ಹೊಸಪೇಟೆ: ಪ್ರತಿನಿತ್ಯ ಸಂಚರಿಸುವ ಅಸಂಖ್ಯಾತ ಪ್ರಯಾಣಿಕರು ಬಸ್ ಚಾಲಕರು ಮತ್ತು ನಿರ್ವಾಹಕರ ಮೇಲೆ ಇಟ್ಟಿರುವ ನಂಬಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರಹಿಮಾನ್ ಎ. ನಂದಗಡಿ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹೊಸಪೇಟೆ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಆರೋಗ್ಯ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಕೆಎಸ್‌ಆರ್‌ಟಿಸಿ ಘಟಕದಲ್ಲಿ ನಡೆದ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಾರಿಗೆ ಇಲಾಖೆಯು ಸಾರ್ವಜನಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸೇರಿಸುವ ಸಂಪರ್ಕ ಕೊಂಡಿಯಾಗಿದೆ. ಇಂತಹ ಸಾರಿಗೆ ಇಲಾಖೆಯು ಆರಂಭದಿಂದ ಶಿಸ್ತು, ಸಂಯಮ ಪಾಲಿಸುತ್ತಾ ಬಂದಿದ್ದು, ಅದನ್ನು ಇನ್ನಷ್ಟು ಹೆಚ್ಚಿಸಿಕೊಂಡಲ್ಲಿ ಅಪವಾದಗಳು ದೂರವಾಗಲಿವೆ ಎಂದರು.

ಪ್ರತಿಯೊಬ್ಬರಿಗೂ ಒಂದಿಲ್ಲೊಂದು ತೊಂದರೆ ತಾಪತ್ರಯಗಳು ಇದ್ದೇ ಇರುತ್ತವೆ. ಇದನ್ನು ಪ್ರತಿಯೊಬ್ಬರೂ ಅರಿಯಬೇಕು. ಯಾವುದೇ ತೊಂದರೆಗಳು ಎದುರಾದಾಗ ಸಂಯಮ ಕಳೆದುಕೊಳ್ಳಬಾರದು. ಸಾವಧಾನದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಅಪರ ಸಿವಿಲ್ ನ್ಯಾಯಾಧೀಶ ಅಶೋಕ ಆರ್.ಎಚ್. ಮಾತನಾಡಿ, ನಮ್ಮ ದೇಶದಲ್ಲಿ ಅಪಘಾತಗಳ ಪ್ರಮಾಣ ಹೆಚ್ಚುತ್ತಿದೆ. ಇದು ವಿಷಾದದ ಸಂಗತಿಯಾಗಿದೆ. ಪ್ರತಿನಿತ್ಯ ಬಸ್ ಏರಿ ವಾಹನ ನಡೆಸುವ ಚಾಲಕರು ಮತ್ತು ನಿರ್ವಾಹಕರು ಕಾನೂನು ಜ್ಞಾನ ಪಡೆದುಕೊಳ್ಳಲೇಬೇಕು. ಹೊಸದಾಗಿ ರೂಪಿತವಾಗುವ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಸಂಕಟದ ಪರಿಸ್ಥಿತಿಯಲ್ಲಿ ಕಾನೂನು ಜ್ಞಾನವೇ ನಮಗೆ ದಾರಿದೀಪವಾಗಲಿದೆ ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಹೇಮಲತಾ ಬಿ. ಹುಲ್ಲೂರ, ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಮೇಶ್ ಬಾಬು ಬಿ.ಎನ್., ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಶಾಂತ್ ನಾಗಲಾಪುರ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ. ಶ್ರೀನಿವಾಸಮೂರ್ತಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲಿಂ ಪಾಷಾ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ, ಆರ್‌ಟಿಒ ವಸಂತ ಚವ್ಹಾಣ, ಪಟ್ಟಣ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಲಕನ್ ಆರ್. ಮಸುಗುಪ್ಪಿ, ಅಭಿಯಂತರ ದಾಸರಿ ರಾಧಾಕೃಷ್ಣ, ರಾಜಶೇಖರ ಮತ್ತಿತರರಿದ್ದರು.