ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವೂ ಸಿಗಲಿ

| Published : Jan 07 2024, 01:30 AM IST / Updated: Jan 07 2024, 05:11 PM IST

ಸಾರಾಂಶ

ಪ್ರತಿಯೊಂದು ಆಚರಣೆಗಳಿಗೆ ತನ್ನದೇ ಆದ ಇತಿಹಾಸವಿದ್ದು, ಅವುಗಳ ಮಹತ್ವ ಅರಿತುಕೊಳ್ಳಬೇಕು. ಸಂಪದ್ಭರಿತವಾದ ನಮ್ಮ ನಾಡಿನ ಶ್ರೇಷ್ಠ ಸಂಸ್ಕೃತಿಗೆ ಪುನಃ ಚೈತನ್ಯ ತುಂಬಿ ಜಗತ್ತಿನಾದ್ಯಂತ ನಮ್ಮ ಸಂಸ್ಕೃತಿಯ ಆಚರಣೆ ಪಸರಿಸಬೇಕಾದ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ

ಅಕ್ಕಿಆಲೂರು: ದುಶ್ಚಟಗಳ ದಾಸರಾಗಿ ದಿನನಿತ್ಯ ಮಾನಸಿಕ ತುಡಿತಕ್ಕೆ ಒಳಗಾಗುತ್ತಿರುವ ಯುವಶಕ್ತಿ ಜಾಗೃತವಾಗಿ ಪೂರ್ವಜರ ಆಚಾರ-ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದು ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಶ್ರೀಗಳು ಹೇಳಿದರು.

ಪಟ್ಟಣದ ಸಿಪಿಎನ್ ಸೇವಾ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಶ್ರೀಚನ್ನವೀರೇಶ್ವರ ಗ್ರಾಮೀಣ ಗುರುಕುಲದಲ್ಲಿ ನಡೆದಿರುವ ಗುರುಕುಲ ಸಂಭ್ರಮ-೨೧ರ ಪ್ರಯುಕ್ತ ನಡೆದ ತಂದೆ-ತಾಯಿಗಳ ಪಾದಪೂಜೆ ವಿಶೇಷ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪಾಶ್ಚಿಮಾತ್ಯ ಸಂಸ್ಕೃತಿಯ ಹಾವಳಿಯಿಂದ ಭಾರತದ ಶ್ರೀಮಂತ ಸಂಸ್ಕೃತಿ ಕಂಕುಳಲ್ಲಿಟ್ಟುಕೊಂಡು, ನೆಮ್ಮದಿ ಹುಡುಕುತ್ತ ಮುನ್ನಡೆದಿರುವ ಯುವಪೀಳಿಗೆಯ ಜಾಣಕುರುಡಿನ ಕುರಿತು ಇಂದಿನ ಪಾಲಕ ಮತ್ತು ಶಿಕ್ಷಕ ವರ್ಗದವರಿಗೆ ಅರಿವಾಗಬೇಕಿದೆ.ಇತ್ತೀಚಿನ ಆಧುನಿಕ ದಿನಗಳಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಯ ಮಧ್ಯೆ ಮಕ್ಕಳು ತಮ್ಮ ತಂದೆ-ತಾಯಿಗಳಿಗೆ ಗೌರವ ನೀಡುವುದನ್ನೇ ಮರೆತು ಬಿಟ್ಟಂತಾಗಿದೆ.

ಶೈಕ್ಷಣಿಕ ರಂಗವೂ ಕೂಡ ಮಕ್ಕಳಿಗೆ ನೈತಿಕತೆಯ ಪಾಠದ ಬದಲು ಕೆಲಸ ಪಡೆಯುವುದೇ ಪರಮ ಗುರಿಯಾಗಬೇಕು ಎಂದು ಹೇಳಿಕೊಡುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.

ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ. ಐ.ವೈ.ಮಾಳೋದೆ ಮಾತನಾಡಿ, ಪ್ರತಿಯೊಂದು ಆಚರಣೆಗಳಿಗೆ ತನ್ನದೇ ಆದ ಇತಿಹಾಸವಿದ್ದು, ಅವುಗಳ ಮಹತ್ವ ಅರಿತುಕೊಳ್ಳಬೇಕು. ಸಂಪದ್ಭರಿತವಾದ ನಮ್ಮ ನಾಡಿನ ಶ್ರೇಷ್ಠ ಸಂಸ್ಕೃತಿಗೆ ಪುನಃ ಚೈತನ್ಯ ತುಂಬಿ ಜಗತ್ತಿನಾದ್ಯಂತ ನಮ್ಮ ಸಂಸ್ಕೃತಿಯ ಆಚರಣೆ ಪಸರಿಸಬೇಕಾದ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ವೀರಣ್ಣ ಸಾಲವಟಗಿ ಮಾತನಾಡಿ, ಮಕ್ಕಳ ಭಾವನೆಗಳಿಗನುಸಾರವಾಗಿ ವರ್ತಿಸಿ, ಅವರಲ್ಲಿನ ಪ್ರತಿಭೆ ಗುರುತಿಸಿ ಉತ್ತೇಜನ ನೀಡುವ ಕೆಲಸ ಪಾಲಕ ಮತ್ತು ಶಿಕ್ಷಕವರ್ಗದ್ದಾಗಿದೆ. ವಿವಿಧ ಸ್ಥರಗಳಲ್ಲಿ ಸರ್ಕಾರದಿಂದ ಲಭ್ಯವಿರುವ ಎಲ್ಲ ಯೋಜನೆಗಳ ಸದುಪಯೋಗ ಪಡೆದುಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕಾಗಿದ್ದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಸಿಆರ್‌ಪಿ ನಾಗಪ್ಪ ಚೂರಿ ಮಾತನಾಡಿದರು. ನಂತರ ಶಾಲೆಯ ಮಕ್ಕಳಿಂದ ತಂದೆ-ತಾಯಿಯರ ಪಾದಪೂಜೆ, ರಂಗೋಲಿ ಪ್ರದರ್ಶನ, ವಿಜ್ಞಾನ ವಸ್ತು ಪ್ರದರ್ಶನ, ಹಳೆಯ ನಾಣ್ಯಗಳ ಪ್ರದರ್ಶನ, ಛದ್ಮವೇಷ ಸ್ಪರ್ಧೆ ಸೇರಿದಂತೆ ವಿಶೇಷ ಕಾರ್ಯಕ್ರಮ ನೆರವೇರಿದವು. ಸಂಸ್ಥೆಯ ಅಧ್ಯಕ್ಷ ನಾಗರಾಜ ಪಾವಲಿ, ಶರತ್ ಸಣ್ಣವೀರಪ್ಪನವರ, ಶಿವಕುಮಾರ ದೇಶಮುಖ, ಎಂ.ಎಂ. ಕಂಬಾಳಿ, ತೋಟಪ್ಪ ತುಪ್ಪದ, ಕವಿತಾ ಅರಳೇಶ್ವರ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.