ಧಾರವಾಡ:

ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆ ಗುರುತಿಸಲು ಅವರಿಗೆ ವೇದಿಕೆ ಕಲ್ಪಿಸುವ ಮೂಲಕ ಮುಖ್ಯವಾಹಿನಿಗೆ ತರುವುದು ಇಂದಿನ ಅಗತ್ಯವಾಗಿದೆ ಎಂದು ಸ್ವರ ಸಾಮ್ರಾಟ್‌ ಪಂ. ಬಸವರಾಜ ರಾಜುಗುರು ಟ್ರಸ್ಟ್‌ ಅಧ್ಯಕ್ಷ ಪಂ. ಕೈವಲ್ಯಕುಮಾರ ಗುರುವ ಹೇಳಿದರು.

ತಾಲೂಕಿನ ಕಲಕೇರಿ ಸಂಗೀತ ವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಚಿಗುರು ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅತ್ಯಂತ ಕ್ರಿಯಾಶೀಲವಾಗಿ ಆಯೋಜಿಸುತ್ತಿರುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು, ಯುವಕರು ಪಾಲ್ಗೊಳ್ಳುವ ಮೂಲಕ ಇಂತಹ ಕಾರ್ಯಕ್ರಮಗಳ ಸದುಪಯೋಗಪಡೆದುಕೊಳ್ಳಬೇಕೆಂದು ತಿಳಿಸಿದರು.

ಡಿ.ವಿ. ಹಾಲಭಾವಿ ಟ್ರಸ್ಟ್‌ ಅಧ್ಯಕ್ಷ ಬಿ. ಮಾರುತಿ ಮಾತನಾಡಿ, ಬದುಕಿಗೆ ಕಲೆ ಅಗತ್ಯ. ಅನಗತ್ಯ ಮೊಬೈಲ್‌ ಬಳಕೆಗೆ ಕಡಿವಾಣ ಹಾಕಿ, ಮಾನಸಿಕ ನೆಮ್ಮದಿ ನೀಡುವ ಸಂಗೀತ, ನೃತ್ಯ ಚಿತ್ರಕಲೆಗಳತ್ತ ನಮ್ಮ ಬಾಲಕರು, ಯುವಕರು ಗಮನ ಹರಿಸಬೇಕು ಎಂದು ಹೇಳಿದರು.


ಹಿರಿಯ ಕಲಾವಿದ ವೀರಣ್ಣ ಪತ್ತಾರ ಮಾತನಾಡಿ, ಎಲ್ಲ ಕಲೆಗಳ ಮೂಲಬೇರು ಜಾನಪದ. ದೊಡ್ಡಾಟಗಳಂತಹ ಜಾನಪದ ಕಲೆಗಳ ಮಹತ್ವವನ್ನು ಮಕ್ಕಳಿಗೆ ತಿಳಿಸುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯ ಅಭಿನಂದನಾರ್ಹ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಲಕೇರಿ ಸಂಗೀತ ವಿದ್ಯಾಲಯ ಮಂಡಳಿ ಸದಸ್ಯರಾದ ರಶ್ಮಿ ಶಿರಹಟ್ಟಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತ ಮಕ್ಕಳು ನಾಡಿನ ಕಲೆ ಉಳಿಸಿ-ಬೆಳೆಸುವಲ್ಲಿ ಮೂಂಚೂಣಿಯಲ್ಲಿ ಇರುವಂತೆ ಸಲಹೆ ನೀಡಿದರು.

ಕುಮಾರ ಬೆಕ್ಕೇರಿ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯೋಪಾಧ್ಯಾಯರಾದ ರೂಪಾಲಿ ಅವರಗೇರಿಮಠ ಹಾಗೂ ಶಿಕ್ಷಕರಿದ್ದರು. ಕಲಕೇರಿ ಸಂಗೀತ ವಿದ್ಯಾಲಯದ ಬಸವನೆವ್ವ ಉಪ್ಪಾರ ತಂಡದಿಂದ ನಾಡಗೀತೆ ಹಾಗೂ ಅಂಕಿತಾ ಮಲ್ಲಿಗವಾಡ ತಂಡದಿಂದ ಸುಗಮ ಸಂಗೀತ ನಡೆಯಿತು. ಸಾತ್ವಿಕ್ ಮಹಾಮನೆ ತಂಡದಿಂದ ಶಾಸ್ತ್ರೀಯ ಸಂಗೀತ, ತನುಶ್ರೀ ಕಟ್ಟಿಸಂಗಾವಿ ಮತ್ತು ತಂಡದಿಂದ ಜಾನಪದ ಗೀತೆ, ವೈಷ್ಣವಿ ಭಟ್ ಅವರಿಂದ ಭರತನಾಟ್ಯ, ಸ್ವಾತಿ ಬಡಿಗೇರ ತಂಡದಿಂದ ದೊಡ್ಡಾಟ ಹಾಗೂ ಪ್ರಾರ್ಥನಾ ಅರಿವೇಡ ಮತ್ತು ತಂಡದಿಂದ ಜಾನಪದ ಸಮೂಹ ನೃತ್ಯ ಪ್ರದರ್ಶನ ಮೂಡಿ ಬಂತು. ಆರತಿ ದೇವಶಿಖಾಮನಿ ನಿರೂಪಿದರು.