ನಮಗೇ ನೀರಿಲ್ಲದಿದ್ದಾಗ ತಮಿಳುನಾಡಿಗೆ ಹರಿಸುವುದಾದರೂ ಹೇಗೆ? । ಕರವೇ ನಾರಾಯಣಗೌಡ ಬಣದಿಂದ ಡೀಸಿ ಕಚೇರಿವರೆಗೆ ಪಾಸಯಾತ್ರೆ

ಕನ್ನಡಪ್ರಭ ವಾರ್ತೆ ತುಮಕೂರು

ಕರ್ನಾಟಕದಲ್ಲಿ ಬರಗಾಲ ಇದ್ದಾಗಲೂ ತಮಿಳುನಾಡಿಗೆ 4.5 ಟಿಎಂಸಿ ನೀರು ಹರಿಸುವಂತೆ ಆದೇಶ ನೀಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ವಿರೋಧಿಸಿ, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಸಮಾವೇಶಗೊಂಡ ನೂರಾರು ಕರವೇ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ತುಮಕೂರು ಜಿಲ್ಲಾಧ್ಯಕ್ಷ ಅರುಣ್‌ ಕೃಷ್ಣಯ್ಯ, ರಾಜ್ಯದಲ್ಲಿ ಈ ವರ್ಷದ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಪರಿಣಾಮ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ರೈತರ ಹಿತಾಸಕ್ತಿ ಹಾಗೂ ಕುಡಿಯುವ ನೀರಿನ ಭದ್ರತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸುವುದು ಅತ್ಯಗತ್ಯವಾಗಿದೆ. ಹಾಗಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಧಿಕ್ಕರಿಸಬೇಕು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿದರು.


ಪ್ರಸ್ತುತ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯಕ್ಕೆ ಸುಮಾರು 2,800- 3,000 ಕ್ಯುಸೆಕ್ಸ್ ಮಾತ್ರ ಒಳಹರಿವು ಇದ್ದು, ಸುಮಾರು 1,700-1,800 ಕ್ಯುಸೆಕ್ಸ್ ಹೊರಹರಿವು ಇದೆ. ಜಲಾಶಯದ ನೀರಿನ ಮಟ್ಟವೂ ಸುಮಾರು 92 ಅಡಿಗಳಷ್ಟೇ ಇದ್ದು, ಇದು ಗರಿಷ್ಠ ಮಟ್ಟಕ್ಕಿಂತ ಸಾಕಷ್ಟು ಕಡಿಮೆಯಾಗಿದೆ. ಕೆಆರ್‌ಎಸ್ ಜಲಾಶಯದ ನೀರು ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರು, ಕೃಷಿ ಮತ್ತು ಕೈಗಾರಿಕಾ ಅಗತ್ಯಗಳಿಗೆ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು.

ಅದೇ ರೀತಿ ಕಬಿನಿ ಜಲಾಶಯಕ್ಕೆ ಸುಮಾರು 12,೦೦೦-15,೦೦೦ ಕ್ಯುಸೆಕ್ಸ್ ಒಳಹರಿವು ಇದ್ದರೂ,10,೦೦೦-14,೦೦೦ ಕ್ಯುಸೆಕ್ಸ್ ಹೊರಹರಿವು ನಡೆಯುತ್ತಿದ್ದು, ಅದರಲ್ಲಿ 8,000-11,೦೦೦ ಕ್ಯುಸೆಕ್ಸ್ ನೀರು ಕಾವೇರಿ ಮೂಲಕ ತಮಿಳುನಾಡಿನ ಕಡೆ ಹರಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಜಲಾಶಯಗಳಲ್ಲಿರುವ ನೀರನ್ನು ರಾಜ್ಯದ ಜನರ ಕುಡಿಯುವ ನೀರು, ರೈತರ ಕೃಷಿ ಹಾಗೂ ಭವಿಷ್ಯದ ಅಗತ್ಯಗಳಿಗೆ ಸಂರಕ್ಷಿಸುವುದು ಅತ್ಯಂತ ಅವಶ್ಯಕವಾಗಿದೆ. ಆದ್ದರಿಂದ ಸರ್ಕಾರವು ರಾಜ್ಯದ ಹಿತ ಕಾಪಾಡುವಂತೆ ಮನವಿ ಮಾಡಿದರು.

ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ರಾಜ್ಯದ ಹಿತಾಸಕ್ತಿಯ ಆಧಾರದ ಮೇಲೆ ಪ್ರಬಲವಾಗಿ ವಿರೋಧಿಸಬೇಕು. ರಾಜ್ಯದ ಜಲಾಶಯಗಳ ವಾಸ್ತವಿಕ ನೀರಿನ ಸಂಗ್ರಹಣೆ ಹಾಗೂ ಮಳೆಯ ಕೊರತೆಯ ಕುರಿತು ಸಮಗ್ರ ವರದಿ ಸಲ್ಲಿಸಿ, ಕರ್ನಾಟಕದ ಪರವಾಗಿ ದೃಢವಾದ ವಾದ ಮಂಡಿಸಬೇಕು. ರಾಜ್ಯದ ಕುಡಿಯುವ ನೀರು ಹಾಗೂ ರೈತರ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗದಂತೆ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಬಾರದು. ಅಗತ್ಯವಿದ್ದಲ್ಲಿ ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲ ಕಾನೂನು ವೇದಿಕೆಗಳಲ್ಲಿ ಕರ್ನಾಟಕದ ಹಕ್ಕುಗಳನ್ನು ಸಮರ್ಥವಾಗಿ ಪ್ರತಿಪಾದಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಒಂದು ವೇಳೆ ಕರ್ನಾಟಕದ ಹಿತಾಸಕ್ತಿ ಕಡೆಗಣಿಸಿ ತಮಿಳುನಾಡಿಗೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತುಮಕೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಾಗೂ ಪ್ರಜಾಸತ್ತಾತ್ಮಕ ಹೋರಾಟವನ್ನು ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇದರಿಂದ ಉಂಟಾಗುವ ಎಲ್ಲ ಬೆಳವಣಿಗೆಗಳಿಗೆ ಸರ್ಕಾರವೇ ಹೊಣೆಗಾರವಾಗಿರುತ್ತದೆ. ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರವೇ ನಾರಾಯಣಗೌಡ ಬಣದ ಗೌರವಾಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಆದೇಶ್.ಸಿ.ಎನ್., ಮಹಿಳಾ ಪ್ರಧಾನ ಕಾರ್ಯದರ್ಶಿ ರಾಧಾಗೌಡ, ತಿಪಟೂರು ತಾಲೂಕು ಅಧ್ಯಕ್ಷ ಶಶಿಧರ್, ಮಧುಗಿರಿ ಅಧ್ಯಕ್ಷ ಶಿವಕುಮಾರ್, ಶಿರಾ ಅಧ್ಯಕ್ಷ ಕಿಶೋರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬರೀಷ್, ಯುವ ಘಟಕದ ಅಧ್ಯಕ್ಷ ಪವನ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.