ಸಹಕಾರಿ ಸಂಘಗಳು ರೈತರ ಅಭಿವೃದ್ಧಿಗೆ ಶ್ರಮಿಸಲಿ-ಶಾಸಕ ಬಣಕಾರ

| Published : Aug 12 2024, 01:06 AM IST

ಸಹಕಾರಿ ಸಂಘಗಳು ರೈತರ ಅಭಿವೃದ್ಧಿಗೆ ಶ್ರಮಿಸಲಿ-ಶಾಸಕ ಬಣಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಗ್ರಾಮದ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ಹೇಗೆ ಕಾರ್ಯನಿರ್ವಹಿಸುತ್ತದೆಯೋ, ಅದೇ ರೀತಿ ಸಹಕಾರಿ ಸಂಘಗಳು ಗ್ರಾಮೀಣ ಭಾಗದ ರೈತರ ಅಭಿವೃದ್ಧಿಗೆ ಸಹರಿಯಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ರಟ್ಟೀಹಳ್ಳಿ: ಒಂದು ಗ್ರಾಮದ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ಹೇಗೆ ಕಾರ್ಯನಿರ್ವಹಿಸುತ್ತದೆಯೋ, ಅದೇ ರೀತಿ ಸಹಕಾರಿ ಸಂಘಗಳು ಗ್ರಾಮೀಣ ಭಾಗದ ರೈತರ ಅಭಿವೃದ್ಧಿಗೆ ಸಹರಿಯಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಮೇಲ್ಮಹಡಿ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಅವರು, ರಟ್ಟೀಹಳ್ಳಿಯ ಸಹಕಾರಿ ಸಂಘ ಸುದೀರ್ಘ 86 ವರ್ಷಗಳಿಂದ ಏಳು ಬೀಳುಗಳನ್ನು ಕಂಡು ಅನೇಕ ರೈತರಿಗೆ ಟ್ರ್ಯಾಕ್ಟರ್‌ಗಳ ಸಾಲ, ಕುರಿ ಸಾಲ, ಹೈನುಗಾರಿಕೆಗಳಿಗೆ ಸಾಲ ಸೇರಿದಂತೆ ವಿವಿಧ ಉದ್ದೇಶಗಳಿಗೆ ಸಾಲ ಸೌಲಭ್ಯ ನೀಡುವ ಮೂಲಕ ತಾಲೂಕಿನಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ, ಮುಂಬರುವ ದಿನಗಳಲ್ಲಿ ರೈತ ಸಭಾ ಭವನಕ್ಕೆ 25.ಲಕ್ಷ ಅನುದಾನದ ಬೇಡಿಕೆ ಇದ್ದು ಸಂಬಂಧ ಪಟ್ಟ ಸಹಕಾರಿ ಸಚಿವರಿಗೆ ಮನವಿ ಮಾಡಿ ಅನುದಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನಿಸುತ್ತೇನೆ ಎಂದರು.

ಹಿರೇಕೆರೂರ ರಟ್ಟೀಹಳ್ಳಿ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಜ್ಞಾವಂತಿಕೆ ಹೊಂದಿದೆ. ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಪ್ರಜ್ಞಾವಂತಿಕೆ ಹೊಂದಿದೆ ಮುಂಬರುವ ದಿನಗಳಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು.

ತಾಲೂಕಿನಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕಾಮಗಾರಿಗಳಾಗಿದ್ದು, ಒಂದು ವಾರದಲ್ಲಿ ಕೋರ್ಟ್‌ ಕಟ್ಟಡದ ಕಾಮಗಾರಿ ಪ್ರಾರಂಭಿಸಿ ಎರಡು ತಿಂಗಳಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರಿಂದ ಉದ್ಘಾಟಿಸಲಾಗುವುದು, ಅದೇ ರೀತಿ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಸಹಕಾರಿ ಸಂಘಗಳು ರೈತರ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ಸಮಾಜ ಮುಖಿ ಹಾಗೂ ಕೃಷಿಗೆ ಸಂಬಂಧಿಸಿದ ಯೋಜನೆಗಳನ್ನು ಕೈಗೊಂಡು ತಾಲೂಕಿನ ಎಲ್ಲ ಸಹಕಾರಿ ಸಂಘಗಳು ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಮಾಜಿ ಶಾಸಕ ಬಿ.ಹೆಚ್. ಬನ್ನಿಕೋಡ ಮಾತನಾಡಿ, ಯಾವ ಸರ್ಕಾರಗಳಾಗಲಿ, ಶಾಸಕರಾಗಲಿ ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ರೈತರಿಗೆ ಪ್ರಮುಖವಾಗಿ ಸಮಯಕ್ಕೆ ಸರಿಯಾಗಿ ಬೀಜ ಗೊಬ್ಬರದ ಅವಶ್ಯಕತೆ, ಬೆಳೆಗಳನ್ನು ಬೆಳೆಯಲು ಉತ್ಪಾದನಾ ಸಾಧನ ಸಲಕರಣೆಗಳು, ಬೆಳೆದ ಬೆಳೆಗಳನ್ನು ಸಂರಕ್ಷಿಸಲು ಗೋದಾಮುಗಳು ಬೇಕು. ಆ ನಿಟ್ಟಿನಲ್ಲಿ ಶಾಸಕರು, ಸಚಿವರು, ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ತಾಲೂಕಿನ ಜನ ಕೇವಲ ಭಾಷಣ ಕೇಳಿ ಚಪ್ಪಾಳೆ ಹೊಡೆಯುವುದಲ್ಲ, ತಮ್ಮ ಹಕ್ಕಿನ ಸವಲತ್ತುಗಳ ಬಗ್ಗೆ ಜನ ಪ್ರತಿನಿಧಿಗಳನ್ನು ಪ್ರಶ್ನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಬಚಾವತ್ ಅವಾರ್ಡ್‌ನಲ್ಲಿ ನಮ್ಮ ತಾಲೂಕಿಗೆ ಬರಬೇಕಾದ ನೀರನ್ನು ಪಡೆಯಲು ಕೇವಲ ಮನೆಯಲ್ಲಿ ಕೂತರೆ ಸಾಲದು, ಪ್ರತಿಯೊಬ್ಬರು ಬೀದಿಗಿಳಿದು ಹೋರಾಡಿದರೆ ಮಾತ್ರ ನಮ್ಮ ಪಾಲಿನ ನೀರು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಸಹಕಾರಿ ಸಂಘಗಳು ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಬೇಕು. ಅದೇ ರೀತಿ ರಟ್ಟೀಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಮುನ್ನುಗ್ಗುತ್ತಿದ್ದು, 86 ವರ್ಷಗಳಿಂದ ಸೇವೆ ಸಲ್ಲಿಸಿ ಆಶಾದಾಯಕವಾಗಿ ಬೆಳೆದಿದೆ ಎಂದು ಶ್ಲಾಘನೆ ವ್ಯಕ್ತ ಪಡಿಸಿದರು.

ರಟ್ಟೀಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷ ದೊಡ್ಡಗೌಡ ಪಾಟೀಲ್‌ ಅಧ್ಯಕ್ಷತೆ ವಹಿಸಿದ್ದರು. ಹಿರೇಕೆರೂರ ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ್, ಅಪೆಕ್ಸ್‌ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ರವಿ ಶಂಕರ ಬಾಳಿಕಾಯಿ, ರವಿ ಮುದಿಯಪ್ಪನವರ, ಪಿ.ಡಿ. ಬಸನಗೌಡ್ರ, ಪ್ರಕಾಶ ಬನ್ನಿಕೋಡ, ಶಂಭಣ್ಣ ಗೂಳಪ್ಪನವರ, ಮಾಲತೇಶಗೌಡ ಗಂಗೋಳ, ರುದ್ರೇಶ ದ್ಯಾವಕ್ಕಳವರ, ರಾಘವೇಂದ್ರ ಹರವಿಶೆಟ್ಟರ, ಸಿದ್ದನಗೌಡ ಪಾಟೀಲ, ಬಸವರಾಜ ಆಡಿನವರ, ವಿಕ್ರಮ ಕುಲಕರ್ಣಿ, ಜಟ್ಟೇಪ್ಪ ಮಳಗೊಂಡರ, ಚಂದ್ರಪ್ಪ ಮಳಗೊಂಡರ ಮುಂತಾದವರು ಇದ್ದರು.