ದಲಿತರು ಶಿಕ್ಷಣ ಪಡೆದು ಸಬಲರಾಗಲಿ: ಶಾಸಕ ತುಕಾರಾಂ

| Published : Mar 11 2024, 01:26 AM IST

ಸಾರಾಂಶ

ಪ್ರೊ. ಬಿ. ಕೃಷ್ಣಪ್ಪನವರು ರಾಜ್ಯದಲ್ಲಿ ಎರಡನೇ ಅಂಬೇಡ್ಕರ್ ಇದ್ದಂತೆ. ದಲಿತರ, ಶೋಷಿತರ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. ಶಿಕ್ಷಣದ ಮಹತ್ವವನ್ನು ಸಾರಿದರು.

ಸಂಡೂರು: ಸ್ವಾತಂತ್ರ್ಯ ದೊರೆತು ೭೮ ವರ್ಷಗಳಾಗಿದ್ದರೂ ತಾಲೂಕಿನಲ್ಲಿ ಮಾದಿಗ ಸಮುದಾಯದ ಸಾಕ್ಷರತೆಯ ಪ್ರಮಾಣ ಶೇ. ೫೦ ದಾಟಿಲ್ಲದಿರುವುದು ಖೇದಕರವಾಗಿದೆ. ಎಲ್ಲರೂ ಶಿಕ್ಷಣವನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಈ. ತುಕಾರಾಂ ತಿಳಿಸಿದರು.

ಪಟ್ಟಣದ ಯಶವಂತವಿಹಾರ ಮೈದಾನದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ೫೦ನೇ ವರ್ಷದ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರೊ. ಬಿ. ಕೃಷ್ಣಪ್ಪನವರು ರಾಜ್ಯದಲ್ಲಿ ಎರಡನೇ ಅಂಬೇಡ್ಕರ್ ಇದ್ದಂತೆ. ದಲಿತರ, ಶೋಷಿತರ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. ಶಿಕ್ಷಣದ ಮಹತ್ವವನ್ನು ಸಾರಿದರು. ಸಂವಿಧಾನವೇ ನಮ್ಮ ಧರ್ಮ. ಎಲ್ಲರೂ ಮಾನವ ಧರ್ಮವನ್ನು ಪಾಲಿಸೋಣ. ಅಂಬೇಡ್ಕರ್, ಬಿ. ಕೃಷ್ಣಪ್ಪನವರ ಹಾಗೂ ಸಂವಿಧಾನದ ಆದರ್ಶಗಳನ್ನು ನಾವು ಅಳವಡಿಸಿಕೊಂಡು, ಕಾರ್ಯರೂಪಕ್ಕೆ ತರಲು ಶ್ರಮಿಸೋಣ ಎಂದರು.

ದಲಿತ ಸಂಘದ ಸಮಿತಿಯ ಮುಖಂಡರು ತಾಲೂಕಿನಲ್ಲಿ ಮಾದಿಗ ಸಮಾಜದ ಸ್ಥಿತಿಗತಿಗಳ ಬಗ್ಗೆ ವಿವರವಾದ ವರದಿ ತಯಾರಿಸಿ ನೀಡಿರುವುದು ಉತ್ತಮ ಕಾರ್ಯವಾಗಿದೆ. ಈ ವರದಿಯನ್ವಯ ಮನೆ ಇಲ್ಲದ ಪ್ರತಿಯೊಬ್ಬರಿಗೆ ಇನ್ನು ನಾಲ್ಕು ವರ್ಷದ ಅವಧಿಯಲ್ಲಿ ತಲಾ ₹೭ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ತಾಲೂಕಿನಲ್ಲಿ ೧೧ ವಸತಿ ಶಾಲೆಗಳನ್ನು ಆರಂಭಿಸಲಾಗಿದೆ. ಇದೇ ರೀತಿಯಾಗಿ ಎಲ್ಲ ಸಮುದಾಯದವರು ತಾಲೂಕಿನಲ್ಲಿಯ ತಮ್ಮ ಸಮುದಾಯದ ಜನರ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಿದರೆ, ಅನುದಾನವನ್ನು ಹಂಚಿಕೆ ಮಾಡಲು ಅನುಕೂಲವಾಗುತ್ತದೆ. ಎಲ್ಲ ಸಮುದಾಯದವರು ಈ ರೀತಿ ವರದಿಯನ್ನು ತಯಾರಿಸಿ ಕೊಡುವಂತೆ ಸಮಾರಂಭದಲ್ಲಿ ವಿವಿಧ ಸಮುದಾಯದ ಮುಖಂಡರಿಗೆ ಶಾಸಕರು ತಿಳಿಸಿದರು.

ಸಂವಿಧಾನದ ಆಧಾರದ ಮೇಲೆ ದೇಶ ಕಟ್ಟಬೇಕು: ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಸಂಡೂರಿನ ವಿರಕ್ತಮಠದ ಪ್ರಭು ಸ್ವಾಮೀಜಿ, ದೇಶವನ್ನು ಧರ್ಮದ ಆಧಾರದ ಮೇಲೆ ಕಟ್ಟಬಾರದು. ಸಂವಿಧಾನ ಹಾಗೂ ಸಮಾನತೆಯ ಆಧಾರದ ಮೇಲೆ ದೇಶ ಕಟ್ಟಬೇಕು. ಧರ್ಮಕ್ಕಿಂತ ಸಂವಿಧಾನ ದೊಡ್ಡದು. ಸಾರಾಯಿ ಬೇಡ. ಹೋಬಳಿಗೊಂದು ವಸತಿಶಾಲೆ ತೆರೆಯಿರಿ ಎಂದು ಸರ್ಕಾರಕ್ಕೆ ಆಗ್ರಹಿಸುವ ಮೂಲಕ ಪ್ರೊ. ಬಿ. ಕೃಷ್ಣಪ್ಪ ಅವರು ಶಿಕ್ಷಣದ ಮಹತ್ವವನ್ನು ಸಾರಿದರು. ಸಂವಿಧಾನ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಪ್ರೊ. ಬಿ. ಕೃಷ್ಣಪ್ಪನವರು ಅನುಸರಿಸಿದರು ಎಂದರು.

ತಾಲೂಕು ಪಂಚಾಯಿತಿ ಇಒ ಎಚ್. ಷಡಾಕ್ಷರಯ್ಯ, ಡಾ. ರಾಮಶೆಟ್ಟಿ ಅವರು ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಹಂಪಿ ಮಾತಂಗ ಮಹರ್ಷಿ ಆಶ್ರಮದ ಪೂರ್ಣಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಸಂಚಾಲಕರಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಎಂ. ರಾಮಕೃಷ್ಣ ಹೆಗಡೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಿತಿಯ ತಾಲೂಕು ಸಂಚಾಲಕ ಮಲ್ಲೇಶ್ ಕಮತೂರು ಅವರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ನಿಂಗಪ್ಪ ಐಹೊಳೆ, ಎಲ್.ಎಚ್. ಶಿವಕುಮಾರ್, ವೈ. ದುರುಗಣ್ಣ, ಮರಿಸ್ವಾಮಿ, ಕಾಶಪ್ಪ, ಕಸ್ತೂರಿ ಮಂಜುನಾಥ್, ವಿವಿಧ ಸಂಘಟನೆಗಳ ಮುಖಂಡರಾದ ಚೌಕಳಿ ಪರಶುರಾಮಪ್ಪ, ರೋಷನ್ ಜಮೀರ್, ಕೆ.ವಿ. ಸುರೇಶ್, ಜಯರಾಂ, ಎಂ. ಶಿವಲಿಂಗಪ್ಪ, ಜಿ.ಎಸ್. ಸೋಮಪ್ಪ, ಚಂದ್ರಶೇಖರ ಮೇಟಿ, ಪಿ. ರಾಜು, ಹನುಮಂತರೆಡ್ಡಿ, ಡಿ.ಎಫ್. ಬಾಬು, ದಲಿತ ಸಂಘರ್ಷ ಸಮಿತಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.