ರೇವಂತ ರೆಡ್ಡಿ ಕೈ ಕುಲುಕದೆ ಇದ್ದರೂ ಡಿ.ಕೆ. ಶಿವಕುಮಾರ ಅವರನ್ನು ನಾನೇ ಗೆಲ್ಲಿಸಿದ್ದು ಎಂದು ಹೇಳಿದ್ದರು. ವಾಲ್ಮೀಕಿ ಹಗರಣದ ಹಣವನ್ನು ತೆಲಂಗಾಣಕ್ಕೆ ಹೋಗಿದ್ದು ಇದೀಗ ಅಭಿವೃದ್ಧಿಯಲ್ಲಿ ನಮಗೆ ಸವಾಲು ಹಾಕುತ್ತಿದ್ದಾರೆ. ಇದಕ್ಕೆ ಯಾರು ಕಾರಣ ಎಂದು ಆರ್. ಅಶೋಕ ಪ್ರಶ್ನಿಸಿದರು.
ಹುಬ್ಬಳ್ಳಿ:
ಅಭಿವೃದ್ಧಿಯಲ್ಲಿ ಕರ್ನಾಟಕಕ್ಕಿಂತ ನಾವೇ ಮುಂದೆ ಇದ್ದೇವೆ ಎಂದು ತೆಲಂಗಾಣ ಸಿಎಂ ರೇವಂತ ರೆಡ್ಡಿ ನೀಡಿರುವ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ ಉತ್ತರಿಸಲಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ ಆಗ್ರಹಿಸಿದ್ದಾರೆ.ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೇವಂತ ರೆಡ್ಡಿ ಕೈ ಕುಲುಕದೆ ಇದ್ದರೂ ಡಿ.ಕೆ. ಶಿವಕುಮಾರ ಅವರನ್ನು ನಾನೇ ಗೆಲ್ಲಿಸಿದ್ದು ಎಂದು ಹೇಳಿದ್ದರು. ವಾಲ್ಮೀಕಿ ಹಗರಣದ ಹಣವನ್ನು ತೆಲಂಗಾಣಕ್ಕೆ ಹೋಗಿದ್ದು ಇದೀಗ ಅಭಿವೃದ್ಧಿಯಲ್ಲಿ ನಮಗೆ ಸವಾಲು ಹಾಕುತ್ತಿದ್ದಾರೆ. ಇದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಪಾಪರ್ ಆಗಿದೆ. ಖಜಾನೆ ಪೂರ್ಣ ಖಾಲಿಯಾಗಿದೆ. ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮೀಯ ₹ 5000 ಕೋಟಿ ನುಂಗಿ ಹಾಕಿದರು. ಈ ಹಗರಣವನ್ನು ನಾವು ಹೊರಗೆ ತೆಗೆದಿದ್ದೇವೆ. ಆ ಹಣ ಎಲ್ಲಿ ಹೋಯಿತು ಎಂಬ ಪ್ರಶ್ನೆಗೆ ಈ ವರೆಗೂ ಉತ್ತರ ನೀಡುತ್ತಿಲ್ಲ. ಸಿಎಂ ಹೇಗೋ ಅಡ್ಜೆಸ್ಟ್ ಮಾಡಿ ಹಾಕುತ್ತೇನೆ ಎಂದಿದ್ದರು. ಆದರೆ, ಈ ವರೆಗೂ ಮಹಿಳೆಯರ ಖಾತೆಗೆ ಜಮಾ ಮಾಡಿಲ್ಲ. ಹಣಕಾಸು ಇಲಾಖೆ ಅಲೋಕೇಶನ್ ಮಾಡಿದ್ದರೆ ಆ ದುಡ್ಡು ಎಲ್ಲಿ ಹೋಯಿತು. ಆ ಹಣವೂ ತೆಲಂಗಾಣಕ್ಕೆ ಹೋಗಿದೆಯಾ ಎಂದು ಪ್ರಶ್ನಿಸಿದರು.ರಾಜ್ಯ ಆಳುತ್ತಿರುವ ಕೇರಳ:
ಕನ್ನಡಿಗರ ಪ್ರಾಬಲ್ಯ ಇರುವ ಕೇರಳದ ಎರಡು ಜಿಲ್ಲೆಗಳಲ್ಲಿ ಕನ್ನಡ ಶಾಲೆ ಮುಚ್ಚುವ ಹಂತಕ್ಕೆ ಬಂದಿದೆ. ಅಲ್ಲಿನ ಸರ್ಕಾರ ಮಲಿಯಾಳಿ ಭಾಷೆಯನ್ನ ಪ್ರಥಮ ಭಾಷೆಯಾಗಿ ಘೋಷಿಸಿದೆ. ಇದು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಅತಿಯಾದ ಪ್ರೀತಿಯ ಫಲವಾಗಿದೆ. ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಅಲ್ಲಿಂದ ಆಯ್ಕೆಯಾದವರು ಪ್ರಿಯಾಂಕಾ ಗಾಂಧಿ ಸೇರಿದಂತೆ ಎಲ್ಲರೂ ಸೇರಿಕೊಂಡು ಕರ್ನಾಟಕವನ್ನು ಕೇರಳದಿಂದಲೇ ಆಳುತ್ತಿದ್ದಾರೆ ಎಂದು ಕಿಡಿಕಾರಿದರು.ವೇದಿಕೆ ಏಕೆ ಹಂಚಿಕೊಂಡಿರಿ:
ಅಕ್ರಮವಾಗಿ ಸರ್ಕಾರಿ ಜಾಗ ಅತಿಕ್ರಮಣ ಮಾಡಿದವರ ಮನೆ ತೆರವು ಮಾಡಿದಾಗ ಕೇರಳ ಮುಖ್ಯಮಂತ್ರಿ ಬುಲ್ಡೋಜರ್ ಸರ್ಕಾರವೆಂದು ಕರೆದಿದ್ದರು. ಅಂಥವರ ಜತೆ ಸಿಎಂ ಸಿದ್ದರಾಮಯ್ಯ ಏಕೆ ವೇದಿಕೆ ಹಂಚಿಕೊಂಡಿದ್ದೀರಿ. ಈ ಕುರಿತು ಬಾಯ್ಬಿಡಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಎಂದು ವ್ಯಂಗ್ಯವಾಡಿದರು.ರಿಯಲ್ ಸಿಎಂ ವೇಣುಗೋಪಾಲ:
ಕೇರಳದ ಜನರಿಗೆ ಮನೆ ಕಟ್ಟಿಕೊಡಲು ಸಿಎಂ ₹ 10 ಕೋಟಿ ಹಣ ನೀಡುತ್ತಾರೆ. ಆದರೆ, ಇಲ್ಲಿನ ಬಡವರಿಗೆ ಮನೆ ನೀಡಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅಶೋಕ, ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಲ್ಲ. ವೇಣುಗೋಪಾಲ ರಿಯಲ್ ಮುಖಮಂತ್ರಿಯಾಗಿದ್ದು ಅವರ ಆದೇಶವನ್ನು ಚಾಚು ತಪ್ಪದೆ ರಾಜ್ಯ ಸರ್ಕಾರ ಪಾಲಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮನರೇಗಾ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಕೆಟ್ಟ ಸರ್ಕಾರ ನೋಡಿಲ್ಲ. ಕೊಲೆ, ಅತ್ಯಾಚಾರ ಡ್ರಗ್ಸ್ ಬಗ್ಗೆ ವಿಶೇಷ ಅಧಿವೇಶನ ಕರೆಯಲಿ. ರಾಜ್ಯದ ಯುವಕರ ರಕ್ಷಣೆ ಮಾಡಲಿ. ತಮಗೆ ಕಮಿಷನ್ ಬರುವುದಿಲ್ಲವೆಂದು ಅಧಿವೇಶನ ಕರೆಯಲು ಮುಂದಾಗಿದ್ದಾರೆ. ವಿಶೇಷ ಅಧಿವೇಶನ ಕರೆದರೆ ಅದು ಕಾಂಗ್ರೆಸ್ ಅಧಿವೇಶನ ಆಗುತ್ತದೆ. ಅದಕ್ಕೆ ಹೋಗಬೇಕೋ ಬೇಡವೋ ಎಂಬುದನ್ನು ನಾಯಕರ ಜತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.ವಿವಸ್ತ್ರ ಪ್ರಕರಣದ ತನಿಖೆ ನಡೆಸದೆ ತಮ್ಮ ಪಕ್ಷದ ಪಾಲಿಕೆ ಸದಸ್ಯೆ ಹಾಗೂ ಪೊಲೀಸರಿಗೆ ಡಿಸಿಎಂ ಡಿ.ಕೆ. ಶಿವಕುಮಾರ ಕ್ಲೀನ್‌ಚಿಟ್ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತೆಯೇ ಬಟ್ಟಿ ಬಿಚ್ಚಿಕೊಂಡಿದ್ದಾಳೆಂದು ಹೇಳಿದ್ದಾರೆ. ಹಾಗಾದರೆ 40 ಪೊಲೀಸ್ ಸಿಬ್ಬಂದಿ ಕತ್ತೆ ಕಾಯುತ್ತಿದ್ದರಾ? ಬಟ್ಟೆ ಬಿಚ್ಚಿಕೊಳ್ಳುವುದನ್ನು ಯಾಕೆ ತಡೆಯಲಿಲ್ಲ. ಪೊಲೀಸರು ದುಶ್ಯಾಸನ ರೀತಿ ವರ್ತಿಸಿದ್ದಾರೆ.
ಆರ್. ಅಶೋಕ, ಪ್ರತಿಪಕ್ಷದ ನಾಯಕ, ವಿಧಾನಸಭೆ