ಸಾರಾಂಶ
ಯಲ್ಲಾಪುರ: ಇಂದು ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಈ ಸಂಸ್ಥೆ ರೂಪಿತಗೊಳ್ಳುತ್ತಿದೆ. ಸಮಾಜಕ್ಕೆ ಆದರ್ಶಪ್ರಾಯ ವ್ಯಕ್ತಿತ್ವ ನಿರ್ಮಾಣ ಮಾಡುವ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಗಳು ರೂಪಿಸಬೇಕು. ಈ ಸಂಸ್ಥೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಡುವಂತಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಶನಿವಾರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦೨೪ನೇ ಸಾಲಿನ "ವಿಶ್ವದರ್ಶನ ಸಂಭ್ರಮ " ಉದ್ಘಾಟಿಸಿ, ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.ಶಿಕ್ಷಣ ಸಂಸ್ಥೆಗಳು ಪ್ರತಿವರ್ಷವೂ ಆಯೋಜಿಸುವ ವಾರ್ಷಿಕೋತ್ಸವಗಳ ಮೂಲಕ ವಿದ್ಯಾರ್ಥಿಗಳು, ಪಾಲಕರು ಮತ್ತು ಪೋಷಕರ ಸಮ್ಮಿಲನಕ್ಕೆ ಅವಕಾಶ ನೀಡುವುದರೊಂದಿಗೆ ಆದರ್ಶ ಪರಿಪಾಲನೆಯ ಪಾಠವನ್ನೂ ನೀಡುತ್ತಿದೆ. ಶಿಕ್ಷಣ ಸಂಸ್ಥೆ ಎಲ್ಲರಿಗೂ ತಿಳಿದಿರುವಂತೆ ಸಂಸ್ಕಾರಯುತ ಶಿಕ್ಷಣವನ್ನು ಬದ್ಧತೆಯಿಂದ ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದು, ತನ್ಮೂಲಕ ಉಳಿದ ಶಿಕ್ಷಣ ಸಂಸ್ಥೆಗಳಿಗೆ ದಿಗ್ದರ್ಶನ ಮಾಡುವಂತಾಗಲಿ ಎಂದರು.
ಕೈಬರಹ ಪತ್ರಿಕೆಯನ್ನು ಅನಾವರಣಗೊಳಿಸಿದ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಹೆಸರಿಗೆ ಅನ್ವರ್ಥಕವೆನಿಸುವ ವಿಶ್ವದರ್ಶನ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡುತ್ತಿರುವ ಘನಕಾರ್ಯ ಮಾಡುತ್ತಿದೆ. ಮಹತ್ವವೆಂದರೆ ವಿದ್ಯಾರ್ಥಿಗಳನ್ನು ವ್ಯಕ್ತಿಗಳನ್ನಾಗಿ ರೂಪಿಸುವ ಸಂಸ್ಥೆ ಇದಾಗಿದೆ ಎಂದರೆ ಅತಿಶಯವಲ್ಲ ಎಂದರು.ಶಾಲೆಯಲ್ಲಿ ಸ್ಥಾಪಿಸಲಿರುವ ದತ್ತಿನಿಧಿಗೆ ಮಾತಾ-ಪಿತರ ಹೆಸರಿನಲ್ಲಿ ಒಂದು ಲಕ್ಷನೀಡುವುದಾಗಿ ಘೋಷಿಸಿದ, ಸಭಾಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೇಮನೆ ಮಾತನಾಡಿ, ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ಆದರ್ಶವಾಗಲೆಂಬ ಉದ್ದೇಶದಿಂದ ಹಿರಿಯರನ್ನು ಗೌರವಿಸಿ, ವಿಶ್ವದರ್ಶನ ಪುರಸ್ಕಾರ ನೀಡುತ್ತ ಬಂದಿದ್ದೇವೆ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ ಮಾಡಿದ ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ದಿ. ಉಮೇಶ ಭಟ್ಟರು ಅನೇಕ ವರ್ಷಗಳ ಹಿಂದೆ ಕಷ್ಟಪಟ್ಟು ಸ್ಥಾಪಿಸಿದ ವಿಶ್ವದರ್ಶನ ಸಂಸ್ಥೆಯು ಇದೀಗ ಸಾಕಷ್ಟು ಅಭಿವೃದ್ಧಿ ಹೊಂದಿ, ಅವರು ಕಂಡ ಕನಸನ್ನು ಇಂದಿನ ಅಧ್ಯಕ್ಷ ಹರಿಪ್ರಕಾಶ ಕೋಣೇಮನೆ ನನಸು ಮಾಡುತ್ತಿದ್ದಾರೆ. ಕೇವಲ ಹಣಗಳಿಕೆಯ ಉದ್ಯಮವೆಂದು ಭಾವಿಸದೇ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮಹಾನ್ ಕಾರ್ಯ ಮಾಡುತ್ತಿದ್ದಾರೆ ಎಂದರು.ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಶಂಕರ ಭಟ್ಟ ಮಾತನಾಡಿ, ಒಂದು ವರ್ಷದ ಶಿಕ್ಷಕರ ಸಾಧನೆಯ ಫಲಶ್ರುತಿಯೇ ವಾರ್ಷಿಕೋತ್ಸವ. ಈ ಸಂಸ್ಥೆ ಮಾದರಿಯಾಗಿ ರೂಪುಗೊಳ್ಳುತ್ತಿದೆ ಎಂದರು. ಗಣ್ಯ ವರ್ತಕ ನರಸಿಂಹಮೂರ್ತಿ ಕೋಣೇಮನೆ ಸಾಂದರ್ಭಿಕ ಮಾತನಾಡಿದರು.
ಶಿರಸಿಯ ಜೀವಜಲ ಕಾರ್ಯಪಡೆಯ ಮತ್ತು ವಿಶ್ವದರ್ಶನದ ಉಪಾಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮಾತನಾಡಿ, ಬಹುಜನರ ಬೆಂಬಲವಿದ್ದಾಗ ಮಾತ್ರ ಉತ್ತಮ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳಬಹುದು. ಆ ನಿಟ್ಟಿನಲ್ಲಿ ಇಲ್ಲಿ ಪಾಲಕರ ಬೆಂಬಲ ಸದಾ ಇದೆ ಎಂದರು.ಬಿ.ಎಡ್. ಕಾಲೇಜು ಪ್ರಾಂಶುಪಾಲ ಡಾ. ಎಸ್.ಎಲ್. ಭಟ್ಟ ವರದಿ ವಾಚಿಸಿದರು. ಅತಿಥಿಗಳಾಗಿದ್ದ ಎಲ್.ಎಸ್.ಎಂ.ಪಿ. ಅಧ್ಯಕ್ಷ ನಾಗರಾಜ ಕವಡೀಕೆರೆ, ಸಾಮಾಜಿಕ ಕಾರ್ಯಕರ್ತರಾದ ರಘುನಂದನ ಭಟ್ಟ, ಪ್ರಸಾದ ಹೆಗಡೆ, ಗಣಪತಿ ಮಾನಿಗದ್ದೆ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳಾದ ರಾಜು ಗಾಂವ್ಕರ, ದಿಗಂತ ಭಟ್ಟ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ನರಸಿಂಹ ಕೋಣೇಮನೆ ಸ್ವಾಗತಿಸಿದರು. ಬಿ.ಎಡ್. ಉಪನ್ಯಾಸಕಿ ವೀಣಾ ಭಾಗ್ವತ ನಿರ್ವಹಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ವಂದಿಸಿದರು.
ಲಯನ್ಸ್ ಸಂಸ್ಥೆ ನೀಡಿದ ಪ್ರಶಸ್ತಿಗಳಿಗೆ ಭಾಜನರಾದ ಶಿಕ್ಷಕರಾದ ಡಾ. ನವೀನಕುಮಾರ ಎ.ಜಿ. ಮತ್ತು ಖೈರುನ್ ಶೇಖ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.